ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 184-186

184. ಸಾಲವನು ತರುವಾಗ | ಹಾಲುಬೋನುಂಡಂತೆ |
ಸಾಲಿಗನು ಬಂದು ಕೇಳಿದರೆ, ಕುಂಡೆಗೆ |
ಚೇಳು ಕಡಿದಂತೆ ಸರ್ವಜ್ಞ ||

ಅರ್ಥ: (ಎರಡನೆಯವರಿಂದ) ಸಾಲವನ್ನು ತೆಗೆದುಕೊಂಡು ಬರುವಾಗ ಹಾಲು-ಅನ್ನವನ್ನು ಉಂಡಂತಾಗುತ್ತದೆ. (ಆದರೆ) ಅದನ್ನೇ ಅವನು ಮರಳಿ ಕೇಳಲು ಬಂದಾಗ (ಮಾತ್ರ) ತಿಗಕ್ಕೆ ಚೇಳು ಕಡಿದಂತಾಗುತ್ತದೆ.

185. ನೂರು ಹಣ ಕೊಡುವ ತನಕ | ಮೀರಿ ವಿನಯದಲಿಪ್ಪ |
ನೂರರೋಳ್ಮೂರ ಕೇಳಿದರೆ, ಸಾಲಿಗನು |
ತೂರುವನು ಮಣ್ಣು ಸರ್ವಜ್ಞ ||

ಅರ್ಥ: ಸಾಲವನ್ನು ಕೊಡುತ್ತಿರುವವರೆಗೆ ಅದು ನೂರಿರಲಿ, ಎಷ್ಟೇ ಇರಲಿ ಅವನೊಂದಿಗೆ (ಸಾಲ ತೆಗೆದುಕೊಳ್ಳುವವನು) ಅತಿಯಾದ ವಿನಯದಿಂದ ನಡೆದುಕೊಳ್ಳುತ್ತಾನೆ; ಆದರೆ (ಕೊಟ್ಟವನು ತಾನು ಕೊಟ್ಟಿದ್ದರಲ್ಲಿಯ ಕೇವಲ) ಎರಡು-ಮೂರು ರೂಪಾಯಿಗಳನ್ನು ಮರಳಿ ಕೇಳಿದರೆ ಮಾತ್ರ ಅವನ ಮೇಲೆ ಮಣ್ಣು ತೂರಲು ಪ್ರಾರಂಭಿಸುವನು.

186. ಗಡ್ಡವಿಲ್ಲದವನ ಮೋರೆ | ದುಡ್ಡು ಇಲ್ಲದ ಚೀಲ |
ಬಡ್ಡಿ ಸಾಲ ತರುವವನ, ಬಾಳುವೆಯು |
ಅಡ್ಡಕ್ಕೂ ಬೇಡ ಸರ್ವಜ್ಞ ||

ಅರ್ಥ: ಗಡ್ಡವಿಲ್ಲದವನ ಮೋರೆಯು (ಮುಖವು) ಹಣವಿಲ್ಲದಂಥ ಬರಿಯ ಚೀಲವು ಹಾಗೂ ಬಡ್ಡಿಯ ಸಾಲವನ್ನು ತರುತ್ತಲೇ ಇರುವಂಥವನ ಬಾಳುವೆಯು ಇವು ಮೂರು ಯಾತಕ್ಕೂ ಬೇಡ.

ಸರ್ವಜ್ಞನ ವಚನಗಳು 181-183

181. ಅಕ್ಕಿಯನು ಬೀಯಂಬ | ಬೆಕ್ಕನ್ನು ಪಿಲ್ಲೆಂಬ |
ಚೊಕ್ಕಟದ ತೇಜಿಗೆ ಕುರ್ರೆಂಬ, ತೆಲುಗನ |
ಸೊಕ್ಕು ನೋಡೆಂದ ಸರ್ವಜ್ಞ ||

ಅರ್ಥ: ಅಕ್ಕಿಗೆ 'ಬಿ' ಎನ್ನುವ ಬೆಕ್ಕಿಗೆ 'ಪಿಲ್ಲಿ' ಎಂಬುವ ಹಾಗೂ ಚೊಕ್ಕಟವಾದ ಕುದುರೆಗೆ 'ಕುರ್ರಂ' ಎನ್ನುವಂಥ ಆಂಧ್ರನ (ತೆಲುಗನ) ಸೊಕ್ಕು ಎಷ್ಟಿರಬೇಕು?.

182. ತಿಗುಳಿ ಜನ ಗೆಣೆಯಿಂದ | ಬೊಗಳುವಾ ಶುನಿ ಲೇಸು |
ಮುಗುಳಿಯ ಮರದ ನೆರಳಿಂದ, ನುಂಗುವ |
ನೆಗಳು ಲೇಸೆಂದ ಸರ್ವಜ್ಞ ||

ಅರ್ಥ: ತಿಗಳು ಜನರು (ತಮಿಳರ) ಗೆಳೆತನಕ್ಕಿಂತ ಬೊಗಳುವ ನಾಯಿಯೇ ಒಳ್ಳೆಯದು. (ಅದರಂತೆ) ಮುಗುಳಿಯ (ಒಂದು ಜಾತಿಯ ಜಾಲಿಯ ಮರ) ಮರದ ನೆರಳಿಗಿಂತ ನುಂಗಿ ಬಿಡುವಂಥ ಮೊಸಳೆ ಉತ್ತಮ.

183. ಹರಳು ಕಾಲಿಗೆ ಹಿಲ್ಲ | ಹುರುಳಿ ಕತ್ತೆಗೆ ಹೊಲ್ಲ |
ಇರುಳೊಳು ಪಯಣ ಬರೆಹೊಲ್ಲ, ತೊತ್ತಿಂಗೆ |
ಕುರುಳು ತಾ ಹೊಲ್ಲ ಸರ್ವಜ್ಞ ||

ಅರ್ಥ: ಕಾಲಿಗೆ ಹರಳು ಅನಾವಶ್ಯಕ, ಕತ್ತೆಹುರುಳಿಯು ಅನಾವಶ್ಯಕ, ರಾತ್ರಿಯಲ್ಲಿನ ಪ್ರಯಾಣವು ಅಯೋಗ್ಯವಾದುದು. (ಅದರಂತೆ) ಸೇವಕಿಗೆ ಮುಂಗುರುಳುಗಳು ಗಂಡಾಂತರಕಾರವಾಗಿದೆ.

ಸರ್ವಜ್ಞನ ವಚನಗಳು 178-180

178. ತುಂಬಿದಾ ಕೆರೆಬಾವಿ | ತುಂಬಿದಂತಿರುವುದೇ?
ನಂಬಿರಬೇಡ ಲಕ್ಷ್ಮಿಯನು, ಬಡತನವು |
ಬೆಂಬಿಡದೆ ಬಹುದು ಸರ್ವಜ್ಞ ||

ಅರ್ಥ: ತುಂಬಿದಂಥ ಕೆರೆ, ಬಾವಿಗಳು ಯಾವಾಗಲೂ ತುಂಬಿಕೊಂಡೇ ಇರುವುವೇ? (ಸಾಧ್ಯವಿಲ್ಲ) ಅದರಂತೆ ಐಶ್ವರ್ಯವನ್ನು ನಂಬಬೇಡ, ಸಿರಿಯ ಹಿಂದೆ ಬಡತನವು ಬಂದೇ ಬರುವುದು.

179. ಉದ್ದಾದ ಮೊಲೆ ಹೊಲ್ಲ | ಇದ್ದೂರ ಹಗೆ ಹೊಲ್ಲ |
ತಿದ್ದದ ಹೋರಿ ಉಳ ಹೊಲ್ಲ, ಬಡವಂತೆ |
ಬಿದ್ದ ನಡು ಹೊಲ್ಲ ಸರ್ವಜ್ಞ ||

ಅರ್ಥ: (ಅತಿಶಯ) ಉದ್ದವಾದ ಮೊಲೆಗಳು ಅನವಶ್ಯಕ, ಇದ್ದೂರಲ್ಲಿ ದ್ವೇಷವನ್ನು ಬೆಳೆಸುವುದು ಅಪಾಯಕರ. ಕೆಲಸಕ್ಕೆ ಬರುವಂತೆ ಅಳವಡಿಸಿಕೊಳ್ಳಲಾರದಂಥ ಹೋರಿಯು ಬಿತ್ತನೆಯ ಕೆಲಸಕ್ಕೆ ನಿರುಪಯೋಗಿಯು. (ಅದರಂತೆ) ನಡುಬಾಗಿದರೆ ಬಡವನು ನಿರುಪಯೋಗಿಯಾಗುತ್ತಾನೆ.

180. ಹುಣಸೆಯಿಂ ನೊರೆವಾಲು | ಗಣಿಕೆಯಿಂ ಹಿರಿತನವು |
ಮೆಣಸಿನಿಂ ಕದಳಿ ಕೆಡುವಂತೆ, ಬಡವ ತಾ |
ಸೆಣಸಿನಿಂ ಕೆಡಗು ಸರ್ವಜ್ಞ ||

ಅರ್ಥ: ಹುಣಸೆಯ ಹುಳಿಯಿಂದ ಹಾಲು, ಸೂಳೆಯಿಂದ (ಮನೆಯು) ಹಿರಿತನವು ಮೆಣಸಿನಿಂದ ಬಾಳೆಯು ಕೆಡುವಂತೆ ಬಡವನು (ತನ್ನಲ್ಲಿಯ) ಸಿಡುಕಿನಿಂದ ಕೆಡುತ್ತಾನೆ.

ಸರ್ವಜ್ಞನ ವಚನಗಳು 175-177

175. ಬೆಕ್ಕು ಮನೆಯೊಳುಲೇಸು | ಮುಕ್ಕು ಕಲ್ಲಿಗೆ ಲೇಸು |
ನಕ್ಕು ನಗಿಸುವ ನುಡಿಲೇಸು, ಊರಿಗೆ |
ಒಕ್ಕಲಿಗ ಲೇಸು ಸರ್ವಜ್ಞ ||

ಅರ್ಥ: ಮನೆಯೊಳಗೆ ಬೆಕ್ಕು ಇದ್ದರೆ ಒಳ್ಳೆಯದು. (ಕಾಳಿನ) ಮುಕ್ಕು (ಬೀಸುವ) ಕಲ್ಲಿಗೆ ಶೋಭೆಯು ಹಾಗೂ ತಾನು ನಕ್ಕು ಇತರರನ್ನು ನಗಿಸುವಂಥ ಮಾತುಗಳು ಬಹಳ ಒಳ್ಳೆಯವು. (ಅದರಂತೆ) ಊರಿಗೆ ಒಕ್ಕಲಿಗನೇ ಭೂಷಣನು.

176. ತರುಕರುವು ಇರದೂರು | ನರಕಭಾಜನಮಕ್ಕು |
ತರುಕರುಂಟಾದರುಣಲುಂಟು, ಜಗಕ್ಕೆಲ್ಲ |
ತರುಕರವೆ ದೈವ ಸರ್ವಜ್ಞ ||

ಅರ್ಥ: ಹೈನವನ್ನೀಯುವ ದನಕರುಗಳು ಇಲ್ಲದಂಥ ಊರುಗಳು ನರಕ ಸಮಾನವೆಂದೇ ಹೇಳಬೇಕು. ಅಂಥ ದನಕರುಗಳಿದ್ದರೆ ಊಟ ಕೊರತೆ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜಗತ್ತಿಗೆಲ್ಲ ದನಕರುಗಳೇ ದೇವ.

177. ಅಂಗನೆಯು ಗುಣಿಯಾಗಿ | ಅಂಗಳಕೆ ಹೊರಸಾಗಿ |
ತಂಗಾಳಿ ಜೊನ್ನದಿರುಳಾಗಿ, ಬೇಸಿಗೆಯು |
ಹಿಂಗದೇ ಇರಲಿ ಸರ್ವಜ್ಞ ||

ಅರ್ಥ: ಸದ್ಗುಣಿಯಾದ ಹೆಂಡತಿಯಿರಬೇಕು. (ಮಲಗಲು) ಅಂಗಳದಲ್ಲಿ ಹೊರಸಿರಬೇಕು ಹಾಗೂ ತಂಗಾಳಿಯನ್ನೀಯುವ ಬೆಳದಿಂಗಳಿನ ರಾತ್ರಿಯಾಗಿರಲು ಸದಾಕಾಲ ಬೇಸಿಗೆಯೇ ಇರಲಿ (ಎಂದು ಹೇಳುವುದು ಸ್ವಾಭಾವಿಕ) .

ಮಂಗಳವಾರ, ಸೆಪ್ಟೆಂಬರ್ 29, 2015

ಸರ್ವಜ್ಞನ ವಚನಗಳು 172-174

172. ಮತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ | ಹೊತ್ತೇರಿ ಹೊಲಕೆ ಹೋದರೆ, ಅವ ತನ್ನ | ನೆತ್ತರವ ಸುಡುವ ಸರ್ವಜ್ಞ || ಅರ್ಥ: ಬಿತ್ತುವ ಪೂರ್ವದಲ್ಲಿ ಒಂದು ಸಲ ಹರಗದೆ, ಬಿತ್ತಿದ ನಂತರ ಒಂದು ಸಲ ನೋಡದೆ, ಮತ್ತು ಹೊತ್ತು ಏರಿದ ನಂತರ ಹೊಲಕ್ಕೆ ಹೋಗುವಂಥವನು ತನ್ನ ರಕ್ತವನ್ನು ತಾನೇ ಸುಟ್ಟುಕೊಂಡಂತೆ. 173. ಹರಗದ ಎತ್ತಾಗೆ | ಬರಡಾದ ಹಯನಾಗೆ | ಹರಟೆ ಹೊಡೆಯು ಮಗನಾಗೆ, ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ || ಅರ್ಥ: (ಹೊಲವನ್ನು) ಹರಗದಂಥ ಎತ್ತುಗಳು, (ಮನೆಯಲ್ಲಿ) ಹಿಡಿಲಾರದಂಥ ಎಮ್ಮೆ-ಆಕಳುಗಳು, ಹಾಳು-ಹರಟೆಯಲ್ಲಿಯೇ ಹೊತ್ತು ಕಳೆಯುವಂಥ ಮಗನು ಇದ್ದುದಾದರೆ ಹೊಲದಲ್ಲಿ ಹುಲ್ಲಿನ ಹೊರತು ಮತ್ತೇನನ್ನು ಬೆಳೆಯಲು ಸಾಧ್ಯವಿಲ್ಲ. 174. ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ | ಬಂಡಿಯಿಲ್ಲದ ಬೇಸಾಯ, ತಲೆಹೋದ | ಮುಂಡದಂತಿಕ್ಕು ಸರ್ವಜ್ಞ || ಅರ್ಥ: ಸೈನ್ಯವಿರದೆ ಇದ್ದ ಅರಸನು, ಕುಂಡವಿಲ್ಲದಂಥ ಯಜ್ಞವು ಹಾಗೂ ಚಕ್ಕಡಿ ಇಲ್ಲದಂಥವನ ಬೇಸಾಯವು (ಒಕ್ಕಲುತನ) ಇವು ಮೂರು ತಲೆಯಿಲ್ಲದವನ ಮುಂಡದಂತೆಯೇ ಸರಿ.

ಸರ್ವಜ್ಞನ ವಚನಗಳು 169-171

169. ಹೊತ್ತಿಗೊದಗಿದ ಮಾತು | ಸತ್ತವನು ಎದ್ದಂತೆ |
ಹೊತ್ತಾಗಿ ನುಡಿದ ಮಾತು, ಕೈಜಾರಿದ |
ಮುತ್ತಿನಂತಿಹುದು ಸರ್ವಜ್ಞ ||

ಅರ್ಥ: ಸಮಯೋಚಿತವಾಗಿ ಬಂದ ಮಾತು, ಸತ್ತವನು ಎದ್ದು ಬಂದಷ್ಟು ಒಳ್ಳೆಯದಾಗುತ್ತದೆ. ಆದರೆ ಸಮರ ಮೀರಿದ ನಂತರ ಆಡಿದ ಮಾತು ಕೈಜಾರಿ ಕೆಳಗೆ ಬಿದ್ದ ಮುತ್ತಿನಂತಾಗುತ್ತದೆ.

170. ಮಾತಿಂಗೆ ಮಾತುಗಳು | ಓತುಸಾಸಿರವುಂಟು |
ಮಾತಾಡಿದಂತೆ ನಡೆದಾತ, ಜಗವನು |
ಕೂತಲ್ಲಿಯೇ ಆಳ್ವ ಸರ್ವಜ್ಞ ||

ಅರ್ಥ: ಮಾತಿಗೆ ಮಾತಾಗಿ ಸಂಗ್ರಹಿಸಿದ್ದು ಸಾವಿರದಷ್ಟಿದ್ದರೂ ಮಾತಾಡಿದಂತೆ ನಡೆಯುವಂಥವನು ಕುಳಿತಲ್ಲಿಯೇ ಎಲ್ಲವನ್ನೂ ನಡೆಸಿಕೊಂಡು ಹೋಗಬಲ್ಲನು.

171. ಕೋಟಿ ವಿದ್ಯೆಗಳಲ್ಲಿ | ಮೇಟಿವಿದ್ಯಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ, ದೇಶ |
ದಾಟವೆ ಕೆಡಗು ಸರ್ವಜ್ಞ ||

ಅರ್ಥ: ಕೋಟಿ ವಿದ್ಯೆಗಳಲ್ಲಿ ಒಕ್ಕಲುತನದ ಉದ್ಯೋಗವೇ ಮಿಗಿಲಾದದ್ದು. ಅದರಿಂದಲೇ ಉಳಿದೆಲ್ಲ ವ್ಯವಸಾಯಗಳು ನಡೆಯುವತ್ತವೆ. ಅದಿಲ್ಲದಿದ್ದರೆ ದೇಶವೇ ತಲೆಕೆಳಗಾಗುತ್ತದೆ.

Page Redirection

ಸೋಮವಾರ, ಸೆಪ್ಟೆಂಬರ್ 28, 2015

ಸರ್ವಜ್ಞನ ವಚನಗಳು 166-168

166. ಮಾತುಬಲ್ಲಾತಂಗೆ | ಯೇತವದು ಸುರಿದಂತೆ | ಮಾತಾಡಲರಿಯದಾತರಿಗೆ ಬರಿಯೇ ತ | ನೇತಾಡಿದಂತೆ ಸರ್ವಜ್ಞ || ಅರ್ಥ: ಮಾತು ಬಲ್ಲವನಿಗೆ ಕಪ್ಪಲಿಯ ನೀರು ಸುರಿದಂತೆ.ಆದರೆ ಮಾತನಾಡಲು ಅರಿಯದವನಿಗೆ ಬರಿಯ ಕಪ್ಪಲಿಯು ಜೋತು ಬಿದ್ದಂತೆಯೇ ಸರಿ. 167. ಮಾತು ಬಲ್ಲಹ ತಾನು | ಸೋತು ಹೋಹುದು ಲೇಸು | ಮಾತಿಂಗೆ ಮಾತು ಮಥಿಸಲ್ಕೆ, ವಿಧಿ ಬಂದು | ಆತುಕೊಂಡಿಹುದು ಸರ್ವಜ್ಞ || ಅರ್ಥ: ಮಾತು ಬಲ್ಲಂಥವನು (ಪ್ರಸಂಗ ಬಂದಾಗ) ಸೋತು ಹೋಗುವುದೇ ಒಳ್ಳೆಯದು. (ಇಲ್ಲದಿದ್ದರೆ) ಮಾತಿಗೆ ಮಾತು ಬೆಳೆಯಲು ವಿರಸ ಉಂಟಾಗುತ್ತದೆ. ಇಂಥ ಸಮಯವನ್ನೇ ಕಾಯುತ್ತ ವಿಧಿಯು ಕುಳಿತುಕೊಂಡಿರುತ್ತದೆ. 168. ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ | ರಸಿಕನಲ್ಲದನ ಬರಿ ಮಾತು, ಕಿವಿಗೆ ಕೂರ್ | ದಶಿಯು ಬಡಿದಂತೆ ಸರ್ವಜ್ಞ || ಅರ್ಥ: ರಸಿಕನಾಡಿದಂಥ ಮಾತುಗಳು ಚಂದ್ರನುದಯಿಸಿ ಬಂದಷ್ಟು ಸಂತಸವನ್ನೀಯುತ್ತದೆ. ಆದರೆ ರಸಿಕನಲ್ಲದವನ ಮಾತುಗಳಿಂದ ಮಾತ್ರ ಕಿವಿಯಲ್ಲಿ ಚೂಪಾದ ಗೂಟವನ್ನು ಹೊಡೆದಂತಾಗುತ್ತದೆ.