ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 175-177

175. ಬೆಕ್ಕು ಮನೆಯೊಳುಲೇಸು | ಮುಕ್ಕು ಕಲ್ಲಿಗೆ ಲೇಸು |
ನಕ್ಕು ನಗಿಸುವ ನುಡಿಲೇಸು, ಊರಿಗೆ |
ಒಕ್ಕಲಿಗ ಲೇಸು ಸರ್ವಜ್ಞ ||

ಅರ್ಥ: ಮನೆಯೊಳಗೆ ಬೆಕ್ಕು ಇದ್ದರೆ ಒಳ್ಳೆಯದು. (ಕಾಳಿನ) ಮುಕ್ಕು (ಬೀಸುವ) ಕಲ್ಲಿಗೆ ಶೋಭೆಯು ಹಾಗೂ ತಾನು ನಕ್ಕು ಇತರರನ್ನು ನಗಿಸುವಂಥ ಮಾತುಗಳು ಬಹಳ ಒಳ್ಳೆಯವು. (ಅದರಂತೆ) ಊರಿಗೆ ಒಕ್ಕಲಿಗನೇ ಭೂಷಣನು.

176. ತರುಕರುವು ಇರದೂರು | ನರಕಭಾಜನಮಕ್ಕು |
ತರುಕರುಂಟಾದರುಣಲುಂಟು, ಜಗಕ್ಕೆಲ್ಲ |
ತರುಕರವೆ ದೈವ ಸರ್ವಜ್ಞ ||

ಅರ್ಥ: ಹೈನವನ್ನೀಯುವ ದನಕರುಗಳು ಇಲ್ಲದಂಥ ಊರುಗಳು ನರಕ ಸಮಾನವೆಂದೇ ಹೇಳಬೇಕು. ಅಂಥ ದನಕರುಗಳಿದ್ದರೆ ಊಟ ಕೊರತೆ ಇರುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಜಗತ್ತಿಗೆಲ್ಲ ದನಕರುಗಳೇ ದೇವ.

177. ಅಂಗನೆಯು ಗುಣಿಯಾಗಿ | ಅಂಗಳಕೆ ಹೊರಸಾಗಿ |
ತಂಗಾಳಿ ಜೊನ್ನದಿರುಳಾಗಿ, ಬೇಸಿಗೆಯು |
ಹಿಂಗದೇ ಇರಲಿ ಸರ್ವಜ್ಞ ||

ಅರ್ಥ: ಸದ್ಗುಣಿಯಾದ ಹೆಂಡತಿಯಿರಬೇಕು. (ಮಲಗಲು) ಅಂಗಳದಲ್ಲಿ ಹೊರಸಿರಬೇಕು ಹಾಗೂ ತಂಗಾಳಿಯನ್ನೀಯುವ ಬೆಳದಿಂಗಳಿನ ರಾತ್ರಿಯಾಗಿರಲು ಸದಾಕಾಲ ಬೇಸಿಗೆಯೇ ಇರಲಿ (ಎಂದು ಹೇಳುವುದು ಸ್ವಾಭಾವಿಕ) .