70. ಬಾಡ ತಿಂಬಾತಂಗ | ಆಡೇನು ಆವೇನು?|
ಕೋಡಗವೇನು ನರಿಯೇನು ? ಮನೆಯಲಿ |
ದ್ದಡನಾಯಿಯೇನು ಸರ್ವಜ್ಞ ||
ಅರ್ಥ: ಮಾಂಸವನ್ನು ತಿನ್ನುವವನಿಗೆ (ಅದು ಯಾವ ಪ್ರಾಣಿಯದಿದ್ದರೇನು?) ಆಡಿನದು ಇರಲಿ, ಆಕಳದ್ದೇ ಇರಲಿ, ಮಂಗನದೇ ಇರಲಿ, ನರಿಯದೇ ಇರಲಿ, ಕೊನೆಗೆ ಮನೆಯೊಳಗಿನ ನಾಯಿಯಾದರೂ ಅಷ್ಟೇ (ಒಟ್ಟು ಮಾಂಸವಿದ್ದರಾಯಿತ).
71. ಹೊಲೆಯಮಾದಿಗರುಂಡು | ತೊಲಗಿಟ್ಟ ತೊಗಲಗುಸಲೆ |
ಕುಲಜರೆಂಬವರಿಗುಣಲಾಯ್ತು, ಹೊಲೆಯರ |
ಕುಲವಾವುದಯ್ಯ ಸರ್ವಜ್ಞ ||
ಅರ್ಥ: ಹೊಲೆ - ಮಾದಿಗರು ಎಂದು ತಾವು ಉಳಿಸಿದ ಚರ್ಮವನ್ನೇ ಒಳ್ಳೆಯ ಕುಲದವರು ಎಂದು ಹೇಳಿಕೊಳ್ಳುವಂಥವರು, ಊಟಕ್ಕೆ ಕೂಡ್ರಲು ಅದನ್ನು ಉಪಯೋಗಿಸಿಕೊಳ್ಳುವಾಗ ಹೊಲೆಯರ ಕುಲವು ಎಂಥದೆಂದು ಹೇಳಬೇಕು ?
72. ಕುಲವಿಲ್ಲ ಯೋಗಿಗೆ | ಛಲವಿಲ್ಲ ಜ್ಞಾನಿಗೆ |
ತೊಲೆಗಂಬವಿಲ್ಲ ಗಗನಕ್ಕೆ, ಸ್ವರ್ಗದಲ್ಲಿ |
ಹೊಲಗೇರಿಯಿಲ್ಲ ಸರ್ವಜ್ಞ ||
ಅರ್ಥ: ಯೋಗಿಗೆ ಕುಲವೆಂಬುದೇ ಇರುವುದಿಲ್ಲ. ಜ್ಞಾನಿಯಾದವನಿಗೆ ಛಲ (ಹಟ) ವಿರುವುದಿಲ್ಲ. ಆಕಾಶಕ್ಕೆ ಆಧಾರ ರೂಪವಾಗಿ ತೊಲೆ-ಕಂಬಗಳೂ ಇಲ್ಲ; (ಅದರಂತೆ) ಸ್ವರ್ಗದಲ್ಲಿ ಮೇಲು-ಕೀಳೆಂಬ ಭೇದಗಳಿರುವುದಿಲ್ಲ.