151. ವೀಳೆಯಿಲ್ಲದ ಬಾಯಿ | ಕೂಳು ಇಲ್ಲದ ನಾಯಿ |
ಬಾಳೆಗಳು ಇಲ್ಲದೆಲೆದೋಟ, ಪಾತರದ |
ಮೇಳ ಮುರಿದಂತೆ ಸರ್ವಜ್ಞ ||
ಅರ್ಥ: ವೀಳ್ಯವನ್ನು ಮೆಲ್ಲದಂಥ ಬಾಯಿ, ಕೂಳು ಇಲ್ಲದಂಥ ನಾಯಿ ಹಾಗೂ ಬಾಳೆಯ ಗಿಡಗಳು ಇಲ್ಲದಂಥ ಎಲೆದೋಟ ಇವುಗಳು ಕುಣಿತದವರ ಮೇಳವು ಮುರಿದಂತೆ.
152. ಅಡಿಕೆ ಕಾಣದ ಬಾಯಿ | ಕುದುಕ ಕಾಣದ ಕಿವಿಯು |
ಒಡಕಿನ ಮನೆಯು ನಿಲುಕದಾ ಫಲಕೆ, ನರಿ |
ಮಿಡುಕಿ ಸತ್ತಂತೆ ಸರ್ವಜ್ಞ ||
ಅರ್ಥ: ಅಡಿಕೆ ಕಾಣದಂಥ ಬಾಯಿಯೂ, ಆಭರಣವನ್ನು ಕಾಣದಂಥ ಕಿವಿಯೂ ಹಾಗೂ ಸೋರುವಂಥ ಮನೆಯೂ (ಇವೆಲ್ಲ) ತನಗೆ ನಿಲುಕದಂಥ ಫಲಕ್ಕಾಗಿ ಮಿಡುಕಿದ ನರಿಯಂತೆಯೇ ಸರಿ.
153. ಲೆತ್ತವೂ ಕುತ್ತವೂ | ಹತ್ತಿದೊಡೆ ಅಳವಲ್ಲ |
ಕುತ್ತದಿಂ ದೇಹ ಬಡವಕ್ಕು, ಲೆತ್ತದಿಂ |
ಬತ್ತಲೆಯಕ್ಕು ಸರ್ವಜ್ಞ ||
ಅರ್ಥ: ಪಗಡೆ ಹಾಗೂ ರೋಗಿಗಳ ಸೋಂಕುವಿಕೆಯು ಒಳ್ಳೆಯದಲ್ಲ. ರೋಗದಿಂದ ಮನುಷ್ಯನ ದೇಹವು ಸೊರಗುತ್ತದೆ. ಪಗಡೆಯಾಟದಿಂದ ಅವನು ಎಲ್ಲವನ್ನು ಕಳೆದುಕೊಂಡು ಬತ್ತಲೆಯಾಗುತ್ತಾನೆ.