22. ಕಲ್ಲು ಗುಂಡಿನ ಮೇಲೆ | ಮಲ್ಲಿಗೆಯ ಅರಳಿಕ್ಕಿ |
ನಿಲ್ಲದೆ ಹಣೆಯ ಬಡಿವರ್ಗೆ , ಬುಗುಟಿಲ್ಲ |
ದಿಲ್ಲ ಕಾಣಯ್ಯ ಸರ್ವಜ್ಞ ||
ಅರ್ಥ: ಕಲ್ಲು ಗುಂಡಿನ ಮೇಲೆ ( ಮೂರ್ತಿಯ ಮೇಲೆ ) ಮಲ್ಲಿಗೆಯ ಹೂವುಗಳನ್ನಿರಿಸಿ ಅದಕ್ಕೆ ಹಣೆಯನ್ನು ಬಡಿಯುವವರು ಹಣೆಯ ಬುಗುಟೆ ಏಳದೆ ಇರಲಾರದು.
23. ಹೆಣ್ಣಿನ ಹೊನ್ನಿನ | ಮಣ್ಣಿನ ಬಲೆಯನ್ನು |
ಹಣ್ಣಿಸಿ ಜಗವನದರೊಳು , ಹಿಡಿದ ಮು |
ಕ್ಕಣ್ಣನ ನೋಡು ಸರ್ವಜ್ಞ ||
ಅರ್ಥ: ಹೆಣ್ಣು - ಹೊನ್ನು ಹಾಗೂ ಮಣ್ಣೆಂಬ ಬಲೆಯನ್ನು ಬಿಸಿ ಸಕಲ ಜಗತ್ತನ್ನೇ ಅದರೊಳಗೆ ಹಿಡಿದುಕೊಂಡಿರುವಂಥ (ಶಿವ) ಮುಕ್ಕಣ್ಣನನ್ನು ನೋಡು.
24. ನರಸಿಂಹನವತಾರ | ಹಿರಿದಾದ ಅದ್ಭುತವು |
ಶರಭನುಗುರಿಂದ ಕೊಲುವಾಗ , ಹರಿ ಊರ |
ನರಿಯಂತಾದ ಸರ್ವಜ್ಞ ||
ಅರ್ಥ: ನರಸಿಂಹನ ಅವತಾರವು ಭಯಂಕರ ಅದ್ಭುತವೆಂದು ಅನ್ನುತ್ತಾರೆ. ಓರ್ವ ರಕ್ಕಸನನ್ನು ಉಗುರುಗಳಿಂದ ಕೊಲ್ಲುವದೆಂದರೆ ಆ ಹರಿಯು ಊರ ಮುಂದಿನ ನರಿಯೇ ಸೈ .