ಗುರುವಾರ, ಸೆಪ್ಟೆಂಬರ್ 17, 2015

ಸರ್ವಜ್ಞನ ವಚನಗಳು 103-105

103. ಹಸಿಯ ಅಲ್ಲವು ಲೇಸು | ಬಿಸಿಯ ಪಳದ್ಯ ಲೇಸು |
ಹುಸಿ ಲೇಸು ಕಳ್ಳ ಹೆಣ್ಣಿಂಗೆ, ಬೈಗಿನ |
ಬಿಸಿಲು ಲೇಸೆಂದ ಸರ್ವಜ್ಞ ||

ಅರ್ಥ: (ಯಾವುದಕ್ಕಾದರೂ) ಹಸಿಯ ಶುಂಠಿಯು ಒಳ್ಳೆಯದು. (ಅದರಂತೆ) ಬಿಸಿಯ ಪಳಿದ್ಯವು ಒಳ್ಳೆಯದು. ಜಾರೆಯಾದ ಹೆಣ್ಣಿಗೆ ಅಸತ್ಯವು ಒಳ್ಳೆಯದು; ಸಾಯಂಕಾಲದ ಬಿಸಿಲೂ ಒಳ್ಳೆಯದು.

104. ಮಜ್ಜಿಗೂಟಕ್ಕೆ ಲೇಸು | ಮಜ್ಜನಕೆ ಮಡಿ ಲೇಸು |
ಕಜ್ಜಾಯ ತುಪ್ಪ ಉಣಲೇಸು, ಮನೆಗೊಬ್ಬ |
ಅಜ್ಜಿ ಲೇಸೆಂದ ಸರ್ವಜ್ಞ ||

ಅರ್ಥ: ಊಟಕ್ಕೆ ಮಜ್ಜಿಗೆಯು ಒಳ್ಳೆಯದು. ಮಡಿಯು ಸ್ನಾನಕ್ಕೆ ಒಳ್ಳೆಯದು. ಕಜ್ಜಾಯ (ಸಿಹಿತಿಂಡಿ) ದೊಂದಿಗೆ ತುಪ್ಪವಿದ್ದರೆ ಅದೂ ಊಟಕ್ಕೆ ಒಳ್ಳೆಯದು. ಅದರಂತೆ ಮನೆಗೊಬ್ಬ ಅಜ್ಜಿಯು (ಮುದುಕಿಯು) ಇದ್ದರೆ ಒಳ್ಳೆಯದು.

105. ಹಸಿದಂಬಲಿ ಲೇಸು | ಬಿಸಿಲಲ್ಲಿ ಕೊಡೆ ಲೇಸು |
ಬಸುರಿನ ಸೊಸೆ ಇರಲು ಲೇಸು, ಸಭೆಗೊಬ್ಬ |
ರಸಿಕ ಲೇಸೆಂದ ಸರ್ವಜ್ಞ ||

ಅರ್ಥ: ಹಸಿದ ಸಮಯದಲ್ಲಿ ಅಂಬಲಿಯೂ ಒಳ್ಳೆಯದು. ಬಿಸಿಲಿನ ವೇಳೆಯಲ್ಲಿ ಕೊಡೆಯು  ಒಳ್ಳೆಯದು. ಬಸುರಿಯಾದ ಸೊಸೆಯು (ಮನೆಯಲ್ಲಿ) ಇದ್ದರೆ ಒಳ್ಳೆಯದು. (ಅದರಂತೆ) ಸಭೆಗೆ ಒಬ್ಬ ರಸಿಕನಿರುವುದು ಒಳ್ಳೆಯದು.