31. ಇದ್ದಲಿಂ ಕರಿದಿಲ್ಲ | ಬುದ್ಧಿಯಿಂ ಹಿರಿದಿಲ್ಲ |
ವಿದ್ಯದಿಂದಧಿಕ ಧನವಿಲ್ಲ,ದೈವತಾ |
ರುದ್ರನಿಂದಿಲ್ಲ ಸರ್ವಜ್ಞ ||
ಅರ್ಥ:ಇದ್ದಲಿಗಿಂತ ಕರಿದಾದುದೂ , ಬುದ್ಧಿಗಿಂತ ಹಿರಿದಾದು ಹಾಗೂ ವಿದ್ಯೆಗಿಂತ ಹೆಚ್ಚಿನ ಧನವು ಯಾವುದೂ ಇಲ್ಲ.ಅದರಂತೆ ರುದ್ರನಿಗಿಂತ ಹೆಚ್ಚಿನ ದೈವತ್ವವು ಕೂಡ ಇಲ್ಲ.
32. ಭಕ್ತಿಯಿಂದಲೇ ಮುಕ್ತಿ | ಭಕ್ತಿಯಿಂದಲೇ ಶಕ್ತಿ |
ಭಕ್ತಿ ವಿರಕ್ತಿಯಳಿದರೀ , ಜಗದಲ್ಲಿ |
ಮುಕ್ತಿಯೆಲ್ಲೆಂದ ಸರ್ವಜ್ಞ ||
ಅರ್ಥ: ಭಕ್ತಿಯಿಂದಲೇ ಮುಕ್ತಿ, ಅದರಿಂದ ಶಕ್ತಿಯೂ ಇದೆ. ಭಕ್ತಿ-ವಿರಕ್ತಿಗಳು ಅಳಿದರೆ ಈ ಜಗತ್ತಿನೊಳಗೆ ಮುಕ್ತಿಯೇ ಇಲ್ಲ.ಅದಕ್ಕಾಗಿ ಭಕ್ತಿಯು ಬೇಕೇ ಬೇಕು.
33. ಕೊಟ್ಟದ್ದು ತನಗೆ | ಬಚ್ಚಿಟ್ಟದ್ದು ಪರರಿಗೆ |
ಕೊಟ್ಟದ್ದು ಕೆಟ್ಟಿತೆನಬೇಡ , ಮುಂದೆ |
ಕಟ್ಟಿಹುದು ಬುತ್ತಿ ಸರ್ವಜ್ಞ ||
ಅರ್ಥ: ಕೈ ಎತ್ತಿ ದಾನ ಕೊಟ್ಟಿದ್ದು ತನಗೆ ಹಾಗೂ ಇರಲಿ ಎಂದು ಮುಚ್ಚಿಟ್ಟದ್ದು ಪರರಿಗೆ ಆಗುವುದು.ದಾನಕೊಟ್ಟು ಕೆಟ್ಟೆ ಎಂದು ನುಡಿಯಬೇಡ. ಅದು ನಿನಗೆ ಮುಂದೆ ಕಟ್ಟಿಟ್ಟ ಬುತ್ತಿಯಂತೆ ಉಪಯೋಗಕ್ಕೆ ಬರುವುದು.