139. ಉಳ್ಳವನು ನುಡಿದಿಹರೆ | ಬೆನ್ನ ಹಿಂದಕ್ಕೆ ಇರಿಸಿ |
ಇಲ್ಲದ ಬಡವ ನುಡಿದರೆ, ತುತ್ತಿನಲಿ |
ಕಲ್ಲು ಕಡಿದಂತೆ ಸರ್ವಜ್ಞ ||
ಅರ್ಥ: (ಹಣ) ಉಳ್ಳವನು ಏನನ್ನು ನುಡಿದರೂ (ಅದು) ಒಳ್ಳೆಯದೆಂದು ಅನ್ನುವರು. ಆದರೆ ಬಡವನು ನಿಜವನ್ನು ನುಡಿದರೂ ಕೂಡ (ಅವನ ಮಾತು) ತುತ್ತಿನೊಳಗೆ ಹಳ್ಳು ಕಡಿದಂತೆ ಅಸಹ್ಯವಾಗುವುದು.
140. ತಪ್ಪು ಮಾಡಿದ ಮನುಜ | ಗೊಪ್ಪುವದೆ ಸಂಕೋಲೆ |
ತಪ್ಪು ಮಾಡಿದಗೆ ಸೆರೆಯು, ಸಂಕೋಲೆಗಳು |
ಇಪ್ಪುದೇ ಸರಿಯು ಸರ್ವಜ್ಞ ||
ಅರ್ಥ: ತಪ್ಪು ಮಾಡುವಂಥ ಮನುಷ್ಯನಿಗೆ ಸಂಕೋಲೆ (ಕೈಕೋಳ) ಒಪ್ಪುವುದಿಲ್ಲ. (ಆದರೆ) ತಪ್ಪು ಮಾಡಿದಂಥ ಮನುಷ್ಯನಿಗಾಗಿ (ಮಾತ್ರ) ಸಂಕೋಲೆ ಹಾಗೂ ಸೆರೆಮನೆಗಳು ಇರುವುದು ಒಳ್ಳೆಯದು.
141. ತಪ್ಪು ಮಾಡಿದವಂಗೆ | ತಪ್ಪುದದು ಸಂಕೋಲೆ |
ತಪ್ಪಿಲ್ಲದಿಪ್ಪ ಶರಣಂಗೆ, ಸಂಕೋಲೆ |
ಬಪ್ಪುವದೇಕೆ ಸರ್ವಜ್ಞ ||
ಅರ್ಥ: ತಪ್ಪು ಮಾಡಿದಂಥವನಿಗೆ ಸಂಕೋಲೆಯು ಎಂದಿಗೂ ತಪ್ಪಲಾರದು. (ಆದರೆ ಅದೇ) ತಪ್ಪು ಮಾಡದಂಥ ಶರಣರಿಗೆ ಸಂಕೋಲೆಗಳೇಕೆ ಬರುತ್ತವೆ (ಬರುವುದಿಲ್ಲವೆಂದರ್ಥ).