115. ತೋಡಿರ್ಪ ಬಾವಿಂಗೆ | ಕೂಡಿರ್ಪ ಜಲಜಾಕ್ಷಿ |
ಮಾಡಿರ್ದಕ್ಕೆಲ್ಲ ಮನಸಾಕ್ಷಿ, ಸರ್ವಕು |
ಮೃಡನೆ ಸಾಕ್ಷಿ ಸರ್ವಜ್ಞ ||
ಅರ್ಥ: ತೋಡಿದಂಥ ಬಾವಿಗೆ (ಅದರೊಳಗೆ) ಸಂಚಯವಾದ ಜಲವೇ ಸಾಕ್ಷಿಯಾಗುತ್ತದೆ. (ತಾನು) ಮಾಡಿದ ಕೆಲಸಕ್ಕೆ (ಅವನ) ಮನವೇ ಸಾಕ್ಷಿಯಾಗಿರುತ್ತದೆ. (ಅದರಂತೆ) ಎಲ್ಲದಕ್ಕೆ ಶಿವನೆ ಸಾಕ್ಷಿಯಾಗಿರುತ್ತಾನೆ.
116.ಸತ್ಯವೆಂಬುದು ತಾನು | ನಿತ್ಯದಲಿ ಮೆರೆದಿಹುದು |
ಮಿಥ್ಯ ಸತ್ಯವನು ಬೆರೆದರೂ, ಇಹಪರದಿ |
ಸತ್ಯಕ್ಕೆ ಜಯವು ಸರ್ವಜ್ಞ ||
ಅರ್ಥ: ಸತ್ಯವೆಂಬುದು ಯಾವಾಗಲೂ (ತಾನೇ ತಾನಾಗಿ) ಮೆರೆಯುವುದು (ಮರೆಯುತ್ತದೆ). (ಒಮ್ಮೊಮ್ಮೆ) ಸತ್ಯದಲ್ಲಿ ಮಿಥ್ಯವು ಬೆರೆತರೂ ಕೂಡ ಇಹ-ಪರಗಳಲ್ಲಿ ಸತ್ಯಕ್ಕೆ ಜಯವು ಕಟ್ಟಿಟ್ಟದ್ದು.
117. ಸತ್ಯರಿಗೆ ಧರೆಯಲ್ಲಿ | ಮಸ್ತಕವನೆರಗುವರು |
ಹೆತ್ತ ತಾಯ್ ಮಗನ ಕರೆವಂತೆ, ಶಿವನವರ |
ನೆತ್ತಿ ಕೊಂಬುವನು ಸರ್ವಜ್ಞ ||
ಅರ್ಥ: ಸತ್ಯವಂತರಿಗೆ ಜಗತ್ತಿನೊಳಗಿರುವವರೆಲ್ಲ ನಮಸ್ಕರಿಸುವರು. ಹಡೆದ ತಾಯಿಯು ತನ್ನ ಮಗುವನ್ನು ಅಕ್ಕರೆಯಿಂದ ಕರೆದುಕೊಳ್ಳುವಂತೆ ಶಿವನು ಅಂಥವರನ್ನು ಎತ್ತಿಕೊಳ್ಳುವನು.