ಸೋಮವಾರ, ಸೆಪ್ಟೆಂಬರ್ 28, 2015

ಸರ್ವಜ್ಞನ ವಚನಗಳು 163-165

163. ಹೊತ್ತಿಗೆ ಮಾತು | ಹತ್ತು ಸಾವಿರ ವ್ಯರ್ಥ |
ಕತ್ತೆ ಕೂಗಿದರೆ ಫಲಳುಂಟು, ಬಹುಮಾತು |
ಕತ್ತೆಗೂ ಕಷ್ಟ ಸರ್ವಜ್ಞ ||

ಅರ್ಥ: ಹೊತ್ತಿಗೆ ಒದಗಲಾರದಂಥ ಹತ್ತು ಸಾವಿರ ಮಾತುಗಳಿದ್ದರೂ ವ್ಯರ್ಥವೇ ಸರಿ. ಕತ್ತೆಯು ಕಿರುಚಿಕೊಂಡರೆ (ಒಂದುವೇಳೆ) ಫಲವುಂಟು. ಆದರೆ ಬಹಳ ಮಾತು ಕತ್ತೆಯ ಕೂಗಿಗಿಂತಲೂ ಕೀಳಾದದ್ದು.

164. ಹೊಲಬನರಿಯದ ಮಾತು | ತಲೆಬೇನೆ ಎದ್ದಂತೆ |
ಹೊಲಬನರಿತು ಒಂದು ನುಡಿದರೆ, ಅದು ದಿವ್ಯ |
ಫಲಪಕ್ವದಂತೆ ಸರ್ವಜ್ಞ ||

ಅರ್ಥ: ದಾರಿ ಬಿಟ್ಟು ಆಡಿದ ಮಾತುಗಳು ತಲೆನೋವು ಎದ್ದಂತೆ. (ಬೇಸರಿಕೆಯನ್ನುಂಟು ಮಾಡುವುದು). ಸರಿಯಾಗಿ ಆಡಿದ ಒಂದು ಮಾತು ಪಕ್ವವಾದ ಫಲದಂತೆ ದಿವ್ಯವಾಗಿರುತ್ತದೆ.

165. ಮಾತಿನಿಂ ನಡೆನುಡಿಯು | ಮಾತಿನಿಂ ಹಗೆ ಕೊಲೆಯು |
ಮಾತಿನಿಂ ಸರ್ವ ಸಂಪದವು, ಲೋಕಕ್ಕೆ |
ಮಾತೆ ಮಾಣಿಕವು ಸರ್ವಜ್ಞ ||

ಅರ್ಥ: ಮಾತಿನಿಂದಲೇ ನಡೆನುಡಿಗಳು, ಶತ್ರುವಿನ ಕೊಲೆಯು ಕೂಡ ಮಾತಿನಿಂದ ಹಾಗೂ ಮಾತಿನಿಂದಲೇ ಸರ್ವ ಸಂಪತ್ತು. (ಹೀಗಿರುವಾಗ ಮಾತೇ ಲೋಕಕ್ಕೆ ಮಾಣಿಕ್ಯವಾಗಿದೆ).