ಮಂಗಳವಾರ, ಸೆಪ್ಟೆಂಬರ್ 8, 2015

ಸರ್ವಜ್ಞನ ವಚನಗಳು 19-21

19. ತನ್ನಲಿಹ ಲಿಂಗವು | ಮನ್ನಿಸಲಿಕರಿಯದೆ |
ಬಿನ್ನಣದಿ ಕಟೆದ , ಪ್ರತಿಮೆಗಳಿಗೆರಗುವ |
ಅನ್ಯಾಯ ನೋಡ ಸರ್ವಜ್ಞ ||

ಅರ್ಥ: ತನ್ನಾತ್ಮದಲ್ಲಿರುವಂಥ ಆತ್ಮಲಿಂಗವನ್ನು ಮನ್ನಿಸಲು ತಿಳಿದುಕೊಳ್ಳದಂಥವನ , ಕಟೆದು ಮಾಡಿದ ಪ್ರತಿಮೆಯ ಮುಂದೆ ಬಾಗುವುದು ಅನ್ಯಾಯದ ಅತಿರೇಕವಲ್ಲದೆ ಇನ್ನೇನು?

20. ಉಣಬಂದ ಜಂಗಮಗೆ | ಉಣಬಡಿಸಲೊಲ್ಲದೆ |
ಉಣದಿಪ್ಪ ಲಿಂಗಕುಣಬಡಸಿ , ಕೈ ಮುಗಿದ |
ಬಣಗುಗಳ ನೋಡ ಸರ್ವಜ್ಞ ||

ಅರ್ಥ: ಊಟ ಮಾಡಲು ಬಲ್ಲ-ಬಂದ-ಜಂಗಮನಿಗೆ ಊಟಕ್ಕೆ ನಿಡದೆ ಉಣಲಾರದಂಥ ಲಿಂಗಕ್ಕೆ ನೈವೇದ್ಯವನು ತೋರಿಸಿ ಕೈ ಮುಗಿಯುವಂಥವನಿಗೆ ಏನೆನ್ನಬೇಕು?

21. ಬಟ್ಟೆಯಾ ಕಲ್ಲಿಂಗೆ | ಒಟ್ಟಿ ಪ್ರತಿಯನ್ನಿಟ್ಟು |
ಕಟ್ಟಿದಾ ಲಿಂಗವಡಿಯಾಡಿ , ಶರಣೆಂಬ |
ಭ್ರಷ್ಟರನು ನೋಡ ಸರ್ವಜ್ಞ ||

ಅರ್ಥ: ಮಾರ್ಗದೊಳಗಿನ ಕಲ್ಲಿಗೆ ಪ್ರತಿಮೆಯನ್ನಿಟ್ಟು ತಮ್ಮಲ್ಲಿದ್ದ ಲಿಂಗವನ್ನು ಮರೆತು ಕಂಡಲ್ಲಿ ಕೈ ಮುಗಿಯುವಂಥ ಭ್ರಷ್ಟರನ್ನು ನೀನು ನೋಡಬಲ್ಲೆಯಾ ?