ಭಾನುವಾರ, ಸೆಪ್ಟೆಂಬರ್ 27, 2015

ಸರ್ವಜ್ಞನ ವಚನಗಳು 157-159

157. ಒಡಲೊಳಗಿನ ವಿದ್ಯೆ | ಒಡಗೂಡಿ ಬರುತಿರಲು |
ಒಡಹುಟ್ಟಿದವರು, ಕಳ್ಳರು, ನೃಪರದನು |
ಪಡೆಯರೆಂತೆಂದ ಸರ್ವಜ್ಞ ||

ಅರ್ಥ: ಒಡಲೊಳಗೆ ಅಡಗಿಕೊಂಡಂಥ ವಿದ್ಯೆಯು (ನಿನ್ನ) ಜೊತೆಗೇ ಬರುವುದು. (ಅದನ್ನು) ನಿನ್ನ ಒಡಹುಟ್ಟಿದವರಾಗಲಿ. ಕಳ್ಳಕಾಕರಾಗಲಿ, ಅರಸನಾಗಲಿ (ನಿನ್ನಿಂದ) ಕಸಿದುಕೊಳ್ಳಲಾರರು.

158. ವನಕ್ಕೆ ಕೋಗಿಲೆ ಲೇಸು | ಮನಕ್ಕೆ ಹರುಷವು ಲೇಸು |
ಕನಕವುಳ್ಳವನ ಕೆಳೆ ಲೇಸು, ವಿದ್ಯಕೆ |
ಅನುಭಾವಲೇಸು ಸರ್ವಜ್ಞ ||

ಅರ್ಥ: ವನದಲ್ಲಿ ಕೋಗಿಲೆ ಇದ್ದರೆ ಶೋಭೆ, ಮನಕ್ಕೆ ಸಂತೋಷವಿದ್ದರೆ ಒಳ್ಳೆಯದು. ಹಾಗೂ ಸಿರಿವಂತರ ಗೆಳೆತನ ಒಳ್ಳೆಯದು. ಅದರಂತೆ ವಿದ್ಯಕ್ಕೆ ಅಂಥಸ್ಪೂರ್ತಿಯಿದ್ದರೆ  ಒಳ್ಳೆಯದು (ಅತ್ಯಗತ್ಯ).

159. ಉದ್ಯೋಗವುಳ್ಳವನ | ಹೊದ್ದುವದು ಸಿರಿ ಬಂದು |
ಉದ್ಯೋಗವಿಲ್ಲದಿರುವವನ, ಕರದೊಳಗೆ |
ಇದ್ದದೂ ಪೋಪ ಸರ್ವಜ್ಞ ||

ಅರ್ಥ: (ಯಾವಾಗಲೂ) ಕೆಲಸ ಮಾಡುವವನ ಬಳಿ ಐಶ್ವರ್ಯವು ತಾನಾಗಿಯೇ ಬಂದು ಆಶ್ರಯಿಸುತ್ತದೆ. ಆದರೆ ನಿರುದ್ಯೋಗಿಯಾದವನ ಕೈಯಲ್ಲಿದ್ದ ಹಣ ಕೂಡ ಹೋಗಿಬಿಡುತ್ತದೆ.