94. ಆರು ಬೆಟ್ಟವನೊಬ್ಬ | ಹಾರಬಹುದೆಂದರೆ |
ಹಾರಬಹುದೆಂದು ಎನಬೇಕು, ಮೂರ್ಖನೊಡ |
ಹೋರಾಟ ಸಲ್ಲ ಸರ್ವಜ್ಞ ||
ಅರ್ಥ: ಆರು ಪರ್ವತಗಳನ್ನು ಹಾರಬಹುದೆಂದು ಒಬ್ಬನು ನುಡಿದರೆ (ಆಗ) ಹಾರಬಹುದೆಂದು ನುಡಿಯಬೇಕಲ್ಲದೆ (ಅಂಥ) ಮೂರ್ಖನೊಂದಿಗೆ ವಾದ ಮಾಡಬಾರದು.
95. ಒಲೆಗುಂಡನೊಬ್ಬನೇ | ಮೆಲಬಹುದು ಎಂದಿಹರೆ |
ಮೆಲಬಹುದು ಎಂಬುವನೇ ಜಾಣ, ಮೂರ್ಖನ |
ಗೆಲುವಾಗದಯ್ಯ ಸರ್ವಜ್ಞ ||
ಅರ್ಥ: ಒಲೆಯ ಗುಂಡನ್ನು ಒಬ್ಬನೇ ತಿನ್ನಬಹುದು ಎಂದು ಯಾರಾದರೂ ಹೇಳಿದರೆ 'ಹೌದು ತಿನ್ನಬಹುದು' ಎನ್ನುವವನೇ ಜಾಣ . ಮೂರ್ಖರನ್ನು ಗೆಲ್ಲುವ ಸಾಹಸಕ್ಕೆ ಹೋಗಬಾರದು.
96. ಮೊಲ ನಾಯಿ ಬೆನ್ನಟ್ಟಿ | ಗೆಲಬಹುದು ಎಂದಿಹರೆ |
ಗೆಲಬಹುದು ಎನಬೇಕು, ಮೂರ್ಖನಲಿ |
ಕಲಹಬೇಡೆಂದ ಸರ್ವಜ್ಞ ||
ಅರ್ಥ: ಮೊಲವು ನಾಯಿಯನ್ನು ಬೆನ್ನಟ್ಟಿ ಗೆಲ್ಲಬಹುದು ಎಂದು ಯಾವನಾದರೂ ಮೂರ್ಖನು ನುಡಿದರೆ 'ಗೆಲ್ಲಬಹುದೆಂದು' ಹೇಳಬೇಕೇ ವಿನಹ ಮೂರ್ಖನೊಂದಿಗೆ ಕಲಹಕ್ಕೆ ಬೀಳಬಾರದು (ಅದು ಒಳ್ಳೆಯದಲ್ಲ).