ಬುಧವಾರ, ಸೆಪ್ಟೆಂಬರ್ 9, 2015

ಸರ್ವಜ್ಞನ ವಚನಗಳು 28-30

28. ಭಾಷೆಯಿಂ ಮೇಲಿಲ್ಲ | ದಾಸನಿಂ ಕೀಳಿಲ್ಲ |
ಮೋಸದಿಂಧದಿಕ ಕೇಡಿಲ್ಲ , ಪರದೈವ |
ಈಶನಿಂದಿಲ್ಲ ಸರ್ವಜ್ಞ||

ಅರ್ಥ: ಭಾಷೆಗಿಂತ ಹೆಚ್ಚಿನದು ಭೃತ್ಯನಿಗಿಂತ ಕೀಳಾದುದೂ ಹಾಗೂ ಮೋಸತನಕ್ಕಿಂತ ಹೆಚ್ಚಿನ ಕೆಡಕುತನವು ಯಾವುದೂ ಇಲ್ಲ. ಪರದೈವ ಪ್ರಾಪ್ತಿಗೆ ಈಶ್ವರನ ಹೊರತು ಇನ್ನಾದರೂ ಇಲ್ಲ.

29. ಶೇಷನಿಂ ಬಲವಿಲ್ಲ | ಮೋಸಧಿಂ ಕಳವಿಲ್ಲ |
ನೇಸರಿಂ ಜಗಕೆ ಹಿತರಿಲ್ಲ , ಪರದೈವ |

ಅರ್ಥ: ಆದಿಶೇಷನ ಸಮಾನ ಬಲವುಳ್ಳವರು ಇಲ್ಲ. ಮೋಸದಂಥ ಕಳ್ಳತನವಿಲ್ಲ.ಜಗತ್ತಿಗೆ ಸೂರ್ಯನಿಗಿಂತ ಹೆಚ್ಚಿನ ಹಿತವಂತರಿಲ್ಲ. ಅದರಂತೆ ಪರದೈವ ಪ್ರಾಪ್ತಿಗೆ ಈಶ್ವರನ ಹೊರತು ಇನ್ನಾರೂ ಇಲ್ಲ.

30. ಮಾತೆಯಿಂ ಹಿತರಿಲ್ಲ | ಕೋತಿಯಿಂ ಮರುಳಿಲ್ಲ |
ಜ್ಯೋತಿಯಿಂದಧಿಕ ಬೆಳಕಿಲ್ಲ, ದೈವವ |
ಜಾತನಿಂದಿಲ್ಲ ಸರ್ವಜ್ಞ ||

ಅರ್ಥ: ತಾಯಿಗಿಂತ ಹೆಚ್ಚಿನ ಬಂಧುಗಳಿಲ್ಲ , ಮಂಗನಿಗಿಂತ ಹೆಚ್ಚಿನ ಮೂರ್ಖರಿಲ್ಲ ಹಾಗೂ ಜ್ಯೋತಿಗಿಂತ ಹೆಚ್ಚಿನ ಬೆಳಕು ಇಲ್ಲ.ಅದರಂತೆಯೇ ದೈವಪ್ರಾಪ್ತಿಯು ಪುತ್ರನಿಂದಲೇ ಹೊರತು ಅನ್ಯರಿಂದಲ್ಲ.