55. ಅನ್ನದಾನಗಳಿಂದ | ಮುನ್ನದಾನಗಳಿಲ್ಲ |
ಅನ್ನಕ್ಕೆ ಮಿಗಿಲು ಇನ್ನಿಲ್ಲ, ಜಗದೊಳಗೆ |
ಅನ್ನವೇ ಪ್ರಾಣ ಸರ್ವಜ್ಞ ||
ಅರ್ಥ: ಅನ್ನದಾನಕ್ಕಿಂತ ಹೆಚ್ಚಿನ ದಾನವೂ ಯಾವುದೂ ಇಲ್ಲ.ಅಲ್ಲದೆ ಅನ್ನಕ್ಕಿಂತ ಮಿಗಿಲಾದುದು ಕೂಡ ಯಾವುದೂ ಇಲ್ಲ.(ಅದಕ್ಕಾಗಿಯೇ) ಈ ಜಗತ್ತಿನೊಳಗೆ ಅನ್ನವೇ ಪ್ರಾಣವೆನ್ನಲು ಅಡ್ಡಿಯಿಲ್ಲ.
56. ವೇದವೇ ಹಿರಿದೆಂದು | ವಾದವನು ಮಾಡುವಿರಿ |
ವೇದದಲೇನು ಅರಿಯದಿಹುದು, ಅನುಭವಿಯ |
ವೇದವೇ ವೇದ ಸರ್ವಜ್ಞ ||
ಅರ್ಥ: ವೇದವೇ ದೊಡ್ಡದು ಎಂದು ವಾದಿಸುವಿರಿ. ಆದರೆ ವೇದದಲ್ಲಿ (ಯಾರೂ) ಅರಿಯಲಾರದಂತಹು ಏನಿದೆ? ವೇದವೆಂದರೆ ಅನುಭವಿಕನ ಹೇಳಿಕಯೇ ಹೊರತು ಬೇರೇನೂ ಅಲ್ಲ.
57. ಓದು ವಾದಗಳಿಂದ | ವೇದತಾ ಘನವಹುದೇ |
ವೇದದ ಹೃದಯವರಿಯದೆಲೆ, ದ್ವಿಜರೆಲ್ಲ |
ಬೂದಿಯಾಗಿಹರು ಸರ್ವಜ್ಞ ||
ಅರ್ಥ: ವಿದ್ಯಾರ್ಜನೆ ಹಾಗೂ ಚರ್ಚೆಗಳಿಂದ ವೇದವೇ ಹೆಚ್ಚಿನದೇ? (ಎಂದಿಗೂ ಅಲ್ಲ) ವೇದದ ತಿರುಳನ್ನರಿಯದೆ ದ್ವಿಜರೆಲ್ಲ (ಇಂದು) ಬೂದಿಯಾಗುತ್ತಿರುವರು.