46.ಕಾಗೆಯಗುಳನು ಕಂಡು | ಕೂಗುವದು ಬಳಗವನು |
ಕಾಗೆ ಕೋಳಿಗಳ , ತೆರೆದುಣ್ಣದವನಿರವು |
ಕಾಗೆಗೂ ಕಷ್ಟ ಸರ್ವಜ್ಞ ||
ಅರ್ಥ: ಒಂದು ಅಗಳು ಅನ್ನವನ್ನು ಕಂಡರೂ ಕೂಡ ಕಾಗೆ ಕಾ-ಕಾ ಎಂದು ತನ್ನ ಬಳಗವನ್ನೇ ಕರೆದು ಅವುಗಳೊಂದಿಗೆ ಕೂಡಿಕೊಂಡು ತಿನ್ನುವುದು.(ಅದರಂತೆ) ಕಾಗೆ ಹಾಗೂ ಕೋಳಿಗಳಂತೆ ತನ್ನವರನ್ನು ಕರೆದುಕೊಂಡು ತಿನ್ನಲಾರದಂಥವನ ಬಾಳುವೆಯು ಕಾಗೆಗಿಂತಲೂ ಕಷ್ಟಕರ (ಹೀನ) ವಾಗುವುದು.
47. ಮಾನವರ ದುರ್ಗುಣವ | ನೇನೆಂದು ಬಣ್ಣಿಪೆನು |
ದಾನಗೈಯೆನಲು ಕನಲುವರು, ದಂಡವನು |
ಮೌನದೀಯುವರು ಸರ್ವಜ್ಞ ||
ಅರ್ಥ: ಮಾನವರ ದುರ್ಗುಣವನ್ನು ಏನೆಂದು ಹೇಳಲಿ ? ದಾನ ಮಾಡು ಎಂದರೆ ಸಿಟ್ಟಿಗೇಳುವರು. ದಂಡವನ್ನು (ಆದರೆ) ಮಾತ್ರ ಮೌನದಿಂದಲೇ ಕೊಡುವರು.
48. ಎರೆಯಲೊಲ್ಲದ ಲೋಭಿ | ಕರೆಯಲೊಲ್ಲದ ಗೋವು |
ಬರಿಗಾಲ ಪಯಣ ಇವು ಮೂರು, ತನ್ನ ತಾ |
ನಿರಿದುಕೊಂಡಂತೆ ಸರ್ವಜ್ಞ ||
ಅರ್ಥ: ಅನ್ಯರಿಗೆ ಕೊಡಲಾರದ ಜಿಪುಣ , ಹಾಲನ್ನೀಯಲಾರದಂತಹ ಹಸು , ಬರಿಗಾಲಿನಿಂದ (ಪಾದರಕ್ಷೆಗಳಿಲ್ಲದೆ) ಮಾಡುವ ಪ್ರಯಾಣ ಇವು ಮೂರು ತನ್ನನ್ನು ತಾನೇ ಇರಿಬುಕೊಂಡಂತೆ (ಇದರಲ್ಲಿ ಸಂಶಯವೇ ಇಲ್ಲ).