67. ಕನ್ನೆಯಾಡನು ತಂದು | ಬನ್ನ ಬಡಿಸುತ ಕೊಂದು |
ಉನ್ನತವ ಪಡೆವ ವಿಪ್ರನಿಂ, ಅಗಸರ |
ಕುನ್ನಿ ಲೇಸೆಂದ ಸರ್ವಜ್ಞ ||
ಅರ್ಥ: (ಮಾಡಲಿರುವ ಯಾಗಕ್ಕಾಗಿ) ಒಂದು ಆಡನ್ನು ತಂದು ಅದನ್ನು ಕೊಂದು ಸ್ವರ್ಗವನ್ನು ಸೇರುವ ಬ್ರಾಹ್ಮಣನಿಗಿಂತ ಅಗಸರವನ ಕುನ್ನಿಯು ಎಷ್ಟೋ ಪಾಲು ಮೇಲು.
68. ಜನ್ಮವಿದ್ಯವು ಎಂದು | ಕನ್ಯೆಯಾಡನು ತಿಂದು |
ಉನ್ನತ ಸ್ವರ್ಗ ಪಡೆಯುವಡೆ, ಹಿಂಡಾಡ |
ತಿನ್ವಕೇನುಳಿದ ಸರ್ವಜ್ಞ ||
ಅರ್ಥ: ಯಜ್ಞದ ವಿಧಾನವು ಎಂದುಕೊಂಡು ಎಳೆಯ ಆಡನ್ನು ಕೊಂದು ತಿಂದು ಸ್ವರ್ಗವನ್ನು ಸೇರುತ್ತಿರುವಾಗ ಅಪರಿಮಿತ ಆಡುಗಳನ್ನು ತಿನ್ನುವವನು ಏತಕ್ಕೆ ಹಿಂದುಳಿದ?
69. ಒಂದಾಡ ತಿಂಬಾತ | ಹೊಂದಿದಡೆ ಸ್ವರ್ಗವನು |
ಎಂದೆಂದು ಆಡನು ಕಡಿತಿಂಬ, ಕಟುಕ ತಾ |
ಇಂದ್ರನೇಕಾಗ ಸರ್ವಜ್ಞ ||
ಅರ್ಥ: (ಕೇವಲ) ಒಂದೇ ಆಡನ್ನು ತಿನ್ನುವವನು ಸ್ವರ್ಗವನ್ನು ಸೇರಿದರೆ, ತಾನು ಜೀವಿಸಿರುವವರೆಗೆ ಪ್ರತಿದಿನವೂ ಆಡುಗಳನ್ನು ಕಡಿದು ತಿನ್ನುವ ಕಟುಕನೇಕೆ ಇಂದ್ರ ಪದವಿಯನ್ನು ಪಡಿಯಲೊಲ್ಲ?