ಮಂಗಳವಾರ, ಸೆಪ್ಟೆಂಬರ್ 8, 2015

ಸರ್ವಜ್ಞನ ವಚನಗಳು 13-15

13. ಹಸಿಯ ಸಮಿಧೆಯ ತಂದು | ಹೊಸೆದರುಂಟೇ ಕಿಚ್ಚು |
ವಿಷಯಂಗಳುಳ್ಳ ಮನುಜಂಗೆ , ಗುರುಕರುಣ |
ವಶವರ್ತಿಯಹುದೇ ಸರ್ವಜ್ಞ ||

ಅರ್ಥ: ಹಸಿಯಿದ್ದ ಅರಳಿಯ ಕಟ್ಟಿಗೆಯ ತುಂಡುಗಳನ್ನು ತಂದು ಅವುಗಳನ್ನು ಒಂದಕ್ಕೊಂದು ತಿಕ್ಕಿದರೆ ಬೆಂಕಿ ಉತ್ಪನ್ನವಾಗಬಹುದೇ?ಎಂದಿಗೂ ಆಗಲಾರದು.ಅದರಂತೆ ವಿಷಯ ವಾಸನೆಯುಳ್ಳ ಮನುಷ್ಯನಿಗೆ ಗುರುವಿನ ಕರುಣೆಯು ಎಂದಿಗೂ ಕರಗತವಾಗಲಾರದು.ಅಂದರೆ ಅವನ ಮನಕ್ಕೆ ಹಿಡಿಸಲಾರದು.

14. ಲಿಂಗಕ್ಕೆ ತೋರಿಸುತ | ನುಂಗುವಾತನೆ ಕೇಳು |
ಲಿಂಗವುಂಬುವುದೇ?ಇದನರಿದು,ಕಪಿಯೇ ನೀ |
ಜಂಗಮಗೆ ನೀಡು ಸರ್ವಜ್ಞ ||

ಅರ್ಥ: ಲಿಂಗಕ್ಕೆ ನೈವೇದ್ಯವನ್ನು ತೋರಿಸಿ ನೀನೇ ತಿಂದುಬಿಡುವ ಮಾನವನೇ ಲಿಂಗವೇನಾದರೂ ಉಣ್ಣಬಹುದೇ ? ಅದೆಂದಿಗೂ ಉಣ್ಣಲಾರದು .ಅದಕ್ಕಾಗಿ ನೀನು ಇದನ್ನು ಅರಿತುಕೊಂಡು ಜಂಗಮ ಗಣಕ್ಕೆ ನೀಡುವುದು ಒಳಿತು.

15. ಓದು ವಾದಗಳೇಕೆ | ಗಾದೆಯ ಮಾತೇಕೆ |
ವೇದ ಪುರಾಣ ನಿನಗೇಕೆ , ಲಿಂಗದ |
ಹಾನಿಯರಿದಲೆ ಸರ್ವಜ್ಞ ||

ಅರ್ಥ: ಲಿಂಗುವಿನ ಮರ್ಮವನ್ನರಿದವನಿಗೆ , ಓದು-ಬರಹ, ವಾದ-ವಿವಾದಗಳಲಿ, ವೇದ-ಪುರಾಣ ಪಠಣವಾಗಲಿ ಏತಕ್ಕೆ ಬೇಕು.ಅದನ್ನರಿತುಕೊಂಡಿದ್ದರೂ ನಿರುಪಯೋಗ.