16. ಇಂಗಿನೊಳು ನಾತವನು | ತೆಂಗಿನೊಳಗಳನೀರು |
ಭೃಂಗ ಕೋಗಿಲೆಯ ಕಂಠದೊಳು , ಗಾಯನವ |
ತುಂಬಿದವರಾರು ಸರ್ವಜ್ಞ ||
ಅರ್ಥ: ಇಂಗಿನೊಳಗೆ ವಾಸನೆಯನ್ನೂ , ತೆಂಗಿನ ಕಾಯಿಯೊಳಗೆ ಎಳನೀರನ್ನೂ ಹಾಗೂ ಭೃಂಗ ಕೋಗಿಲೆಗಳ ಕಂಠದಲ್ಲಿ ಮಧುರ ಗಾಯನ ನಿನಾದವನ್ನೂ ತುಂಬಿದವರು ಯಾರು?(ದೇವರು ಎಂದರ್ಥ).
17. ಕಳ್ಳಿಯೊಳು ಹಾಲು ಮುಳು | ಗಳ್ಳಿಯೊಳು ಹೆಜ್ಜೇನು |
ಎಳ್ಳಿನೊಳಗೆಣ್ಣೆ ಹನಿದಿರಲು , ಶಿವಲೀಲೆ |
ಸುಳ್ಳೆನ್ನಬಹುದೆ ಸರ್ವಜ್ಞ ||
ಅರ್ಥ: ಕಳ್ಳಿಯೊಳಗೆ ಹಾಲನ್ನೂ , ಮುಳಗಳ್ಳಿಯಂಥ ಕಂಟಿಯೊಳಗೆ ಹಜ್ಜೇನನ್ನೂ , ಎಳ್ಳಿನೊಳಗೆ ಎಣ್ಣೆಯನ್ನೂ ನಿರ್ಮಿಸಿರುವಂಥ ಶಿವನ ಲೀಲೆಯನ್ನು ಸುಳ್ಳೆನ್ನಲು ಸಾಧ್ಯವಿದೆಯೇ ? (ಎಂದಿಗೂ ಇಲ್ಲ)
18. ನರನು ಬೇಡುವ ದೈವ | ವರವೀಯಬಲ್ಲುದೇ |
ತಿರವರನಡರಿ , ತಿರಿವರೇನಿದನರಿತು |
ಹರನು ಬೇಡುವದು ಸರ್ವಜ್ಞ ||
ಅರ್ಥ: ಮಾನವನನ್ನೇ ಬೇಡುವ ದೈವವು ಅವನಿಗೆ ಮರವನ್ನೀಯಲು ಸಾಧ್ಯವಿದೆಯೇ ? ಅಂಥ ದೈವದಿಂದ ವರವನ್ನು ಬಯಸುವುದೆಂದರೆ ದರಿದ್ರನ ಮನೆಗೆ ಭಿಕ್ಷುಕನು ಹೋದಂತಯೇ ಸರಿ. ಅದಕ್ಕಾಗಿ ಹರನನ್ನು ಬೇಡುವುದು ಒಳಿತು.