127. ಮಾಳಿಗೆಯ ಮನೆ ಲೇಸು | ಗೂಳಿಯ ಪಶು ಲೇಸು |
ಈಳಿಯ ಹಿತ್ತಲಿರಲೇಸು, ಪತಿವ್ರತೆಯ |
ಬಾಳುಲೇಸೆಂದ ಸರ್ವಜ್ಞ ||
ಅರ್ಥ: ಮಾಳಿಗೆಯ ಮನೆಯು ಒಳ್ಳೆಯದು. ಗೂಳಿಯದು ಪಶುವು ಒಳ್ಳೆಯದು ಹಾಗೂ ಹಿತ್ತಲಲ್ಲಿ ನಿಂಬಿಮೆಯ ಗಿಡವಿದ್ದರೆ ಒಳ್ಳೆಯದು. ಅದರಂತೆ ಪತಿವ್ರತೆಯಾದವಳ ಬಾಳುವಯೇ ಒಳ್ಳೆಯದಾಗಿರುತ್ತದೆ.
128. ಅನ್ಯ ಪುರುಷನ ಕಂಡು | ತನ್ನ ಪಡೆದವನೆಂದು |
ಮನ್ನಿಸಿ ನಡೆವ ಸತಿಯಳಿಗೆ, ಸ್ವರ್ಗದೊಳು |
ಹೊನ್ನಿನ ಮನೆಯು ಸರ್ವಜ್ಞ ||
ಅರ್ಥ: ಅನ್ಯ ಪುರುಷನನ್ನು ತಂದೆಯ ಸಮಾನವೆಂದು ತಿಳಿದು ಅದರಂತೆ ನಡೆಯುವಂಥ ಸಾಧ್ವಿಮಣಿಗೆ ಸ್ವರ್ಗದೊಳಗಿನ ಬಂಗಾರದ ಮಹಲು ಕಾಯ್ದಿರಿಸಲಾಗಿರುತ್ತದೆ.
129. ತಂದೆ ತಾಯಿಗಳು ಘನ | ದಿಂದ ವಂದಿಸುವಂಗೆ |
ಬಂದ ಕುತ್ತುಗಳು ಬಯಲಾಗಿ, ಸ್ವರ್ಗವದು ಮುಂದೆ ಬಂದಕ್ಕು ಸರ್ವಜ್ಞ ||
ಅರ್ಥ: ತಂದೆ-ತಾಯಿಗಳಲ್ಲಿ ವಿನಯದಿಂದ ಬಂದಂಥ ಕುತ್ತು (ಗಂಡಾಂತರ) ಗಳೆಲ್ಲವೂ ಬಯಲಾಗಿ ಸ್ವರ್ಗವು ಎದುರಿಗೇ ಬರುವುದರಲ್ಲಿ ಸಂದೇಹವಿಲ್ಲ.