ಗುರುವಾರ, ಅಕ್ಟೋಬರ್ 1, 2015

ಸರ್ವಜ್ಞನ ವಚನಗಳು 190-192

190. ಬೂದಿಯೊಳು ಹುದುಗಿಸುತ | ವೇದಿಸುತ ಮರೆಮಾಡಿ |
ಕಾದಿರ್ದ ಚಿನ್ನದೊಳು ಬೆರೆಸಿ, ಒರೆಹಚ್ಚಿ |
ಊದುತಲೆ ಟೊಣೆವ ಸರ್ವಜ್ಞ ||

ಅರ್ಥ: (ಬಂಗಾರವನ್ನು) ಬೂದಿಯೊಳಗೆ ಮುಚ್ಚಿಡುತ್ತ (ಗಿರಾಕಿ) ನೋಡುತ್ತಿರುವಂತೆಯೆ ಮರೆಮಾಡಿ ಕಾಯ್ದ ಬಂಗಾರದೊಳಗೆ ಕುದಿಸಿ ಒರೆಹಚ್ಚಿ ಊದುತ್ತಿರುವಂತೆಯೇ (ಅಕ್ಕಸಾಲಿಗನು) ಹಾರಿಸಿಬಿಡುವನು.

191. ಅಕ್ಕಸಾಲೆಯ ಮಗುವು | ಚಿಕ್ಕದೆಂದೆನಬೇಡ |
ಚಿಕ್ಕಟವು ಮೈಯ್ಯ ಕಡಿವಂತೆ, ಚಿಮ್ಮಟವ |
ನಿಕ್ಕುತ್ತಲೆ ಕಳೆವ ಸರ್ವಜ್ಞ ||

ಅರ್ಥ: ಅಕ್ಕಸಾಲಿಗನ ಮಗನನ್ನು ಚಿಕ್ಕವನೆಂದು ಭಾವಿಸಬೇಡ. ಅತಿ ಚಿಕ್ಕದಾದ ಚಿಕ್ಕಾಡು ಮೈತುಂಬ ಕಡಿವಂತೆ ಅವನು (ಚಿಮ್ಮಟಗೆ ಬರುತ್ತಲೇ) ತನ್ನ 'ಉದ್ಯಮ' ವನ್ನು ಪ್ರಾರಂಭಿಸುವನು.

192. ಅಡ್ಡ ಬಡ್ಡಿಯೂ ಹೊಲ್ಲ | ಗಿಡ್ಡ ಬಾಗಿಲ ಹೊಲ್ಲ |
ಹೆಡ್ಡರೊಡನಾಟ ಹೊಲ್ಲ, ಬಡಿಗ ತಾ |
ರೊಡ್ಡನಿರೆ ಹೊಲ್ಲ ಸರ್ವಜ್ಞ ||

ಅರ್ಥ: ಅಡ್ಡವಾದಂಥ ಬಡ್ಡೆಯು ಅಯೋಗ್ಯವಾದುದು. ಮೂರ್ಖರ ಸಂಗವು ಒಳ್ಳೆಯದಲ್ಲ. ಅದರಂತೆ ಎಡಗೈಯಿಂದ ಕೆಲಸ ಮುಡುವಂಥ ಬಡಿಗನೂ ನಿರುಪಯೋಗಿಯು.