ಶುಕ್ರವಾರ, ಅಕ್ಟೋಬರ್ 2, 2015

ಸರ್ವಜ್ಞನ ವಚನಗಳು 193-195

193. ಹಣಜಿ ಬತ್ತವು ಅಲ್ಲ | ಅಣಬೆ ಸತ್ತಿಗೆಯಲ್ಲ |
ಕಣಕದ ಕಲ್ಲು ಮಣಿಯಲ್ಲ, ಬಣಜಿಗನು |
ಗುಣವಂತನಲ್ಲ ಸರ್ವಜ್ಞ ||

ಅರ್ಥ: ಹಣಜಿಯು (ಒಂದು ತರಹದ ಕಲ್ಲು) ಬತ್ತವಾಗಲಾರದು. ನಾಯಿ ಕೊಡೆಯು ಕೊಡೆಯಾಗಲಾರದು. ಕಣಕವನ್ನರಿಯುವ ಕಲ್ಲು ಮಣಿಯಾಗಬಾರದು. ಅದರಂತೆ ಬಣಜಿಗನು ಗುಣವಂತನಾಗಲಾರನು.

194. ಎಳ್ಳು ಗಾಣಿಗಬಲ್ಲ | ಸುಳ್ಳು ಸಿಂಪಿಗ ಬಲ್ಲ |
ಕಳ್ಳರನು ಬಲ್ಲ ತಳವಾರ, ಬಣಜಿಗನು |
ಎಲ್ಲ ಬಲ್ಲ ಸರ್ವಜ್ಞ ||

ಅರ್ಥ: ಗಾಣಿಗರವನು ಎಳ್ಳನ್ನೂ, ಸಿಂಪಿಗರನು ಸುಳ್ಳು ಹೇಳುವುದನ್ನೂ ಹಾಗೂ ತಳವಾರನು (ವಾಲೀಕಾರ) ಕಳ್ಳನನ್ನೂ ಬಲ್ಲವನಾದರೆ ಬಣಜಿಗನು ಮಾತ್ರ ಎಲ್ಲರನ್ನೂ ಬಲ್ಲವನಾಗಿರುತ್ತಾನೆ.

195. ಕೊಂಬು ಹೋರಿಗೆ ಲೇಸು | ತುಂಬು ಕೇರಿಗೆ ಲೇಸು |
ಕುಂಬಾರ ಲೇಸು ಊರಿಂಗೆ, ಹರದಂಗೆ |
ನಂಬುಗೆಯೇ ಲೇಸು ಸರ್ವಜ್ಞ ||

ಅರ್ಥ: ಹೋರಿಗೆ ಕೊಂಬುಗಳು, ಓಣಿಗೆ ಜನವಸತಿಯು, ಊರಿಗೆ ಕುಂಬಾರನು ಶೋಭಾಯಮಾನವಾಗುವಂತೆ ವ್ಯಾಪಾರಸ್ಥನಿಗೆ ನಂಬುಗೆಯೇ ಭೂಷಣವು.