ಗುರುವಾರ, ಅಕ್ಟೋಬರ್ 1, 2015

ಸರ್ವಜ್ಞನ ವಚನಗಳು 187-189

187. ಉದ್ದರಿಯ ಕೊಟ್ಟಣ್ಣ | ಹದ್ದಾದ ಹಾವಾದ |
ಎದ್ದೆದ್ದು ಹರಿವ ನಾಯಾದ, ಹುತ್ತದ |
ಗೊದ್ದದಂತಾದ ಸರ್ವಜ್ಞ ||
Click here to Browse free internet
ಅರ್ಥ: (ಯಾವುದಾದರೊಂದು) ಉದ್ದರಿಯಾಗಿ ಕೊಟ್ಟಂಥವನು ಹದ್ದಿನಂತೆ, ಹಾವಿನಂತೆ ಹಾಗೂ ಎದ್ದೆದ್ದು ಕಚ್ಚಲು ಬರುವ ನಾಯಿಯಂತಾಗುವನಲ್ಲದೆ ಹುತ್ತದೊಳಗಿನ ಇರುವೆಯಂತೆಯೂ ಆಗುತ್ತಾನೆ.
188. ಹಾಲು ಬೋನಕೆ ಲೇಸು | ಮಾಲೆ ಕೊರಳಿಗೆ ಲೇಸು |
ಸಾವಿಲ್ಲದವನ ಮನೆ ಲೇಸು, ಬಾಲರ |
ಲೀಲೆ ಲೇಸೆಂದ ಸರ್ವಜ್ಞ ||
ಅರ್ಥ: (ಊಟಕ್ಕೆ) ಹಾಲು ಬಹಳ ಒಳ್ಳೆಯದು. (ಹೂವಿನ) ಮಾಲೆಯು ಕೊರಳಿಗೆ ಶೋಭೆಯನ್ನುಂಟು ಮಾಡುವುದು. ಯಾರ ಮನೆಯಲ್ಲಿ ಸಾವೇ ಕಂಡಿಲ್ಲವೋ ಅಂಥ ಮನೆ ಲೇಸು. (ಅದರಂತೆ) ಚಿಕ್ಕ ಬಾಲಕರ ಲೀಲೆಯು ಇನ್ನೂ ಒಳ್ಳೆಯದು (ಮನಕ್ಕೆ ಆಹ್ಲಾದ ನೀಡುವುದು).
189. ಅಕ್ಕಸಾಲೆಯನೂರಿ | ಗೊಕ್ಕಲೆಂದೆನಬೇಡ |
ಬೆಕ್ಕುಬಂದಿಲಿಯ ಹಿಡಿವಂತೆ, ಊರಿಗವ |
ರಕ್ಕಸನು ನೋಡ ಸರ್ವಜ್ಞ ||
ಅರ್ಥ: ಅಕ್ಕಸಾಲಿಗನನ್ನು ಒಂದೂರಿನ ಒಕ್ಕಲು ಮನೆತನಸ್ಥ ಎಂದು ಭಾವಿಸಬೇಡ. ಬೆಕ್ಕು (ಸದ್ದಿಲ್ಲದೇ) ಬಂದು ಇಲಿಯನ್ನು ಹಿಡಿದು ತಿನ್ನುವಂತೆ ಅವನು (ಅಕ್ಕಸಾಲಿಗನು) ಊರಿಗೊಬ್ಬ ರಾಕ್ಷಸನಿದ್ದಂತೆ (ಆಗುವನು).