ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 184-186

184. ಸಾಲವನು ತರುವಾಗ | ಹಾಲುಬೋನುಂಡಂತೆ |
ಸಾಲಿಗನು ಬಂದು ಕೇಳಿದರೆ, ಕುಂಡೆಗೆ |
ಚೇಳು ಕಡಿದಂತೆ ಸರ್ವಜ್ಞ ||

ಅರ್ಥ: (ಎರಡನೆಯವರಿಂದ) ಸಾಲವನ್ನು ತೆಗೆದುಕೊಂಡು ಬರುವಾಗ ಹಾಲು-ಅನ್ನವನ್ನು ಉಂಡಂತಾಗುತ್ತದೆ. (ಆದರೆ) ಅದನ್ನೇ ಅವನು ಮರಳಿ ಕೇಳಲು ಬಂದಾಗ (ಮಾತ್ರ) ತಿಗಕ್ಕೆ ಚೇಳು ಕಡಿದಂತಾಗುತ್ತದೆ.

185. ನೂರು ಹಣ ಕೊಡುವ ತನಕ | ಮೀರಿ ವಿನಯದಲಿಪ್ಪ |
ನೂರರೋಳ್ಮೂರ ಕೇಳಿದರೆ, ಸಾಲಿಗನು |
ತೂರುವನು ಮಣ್ಣು ಸರ್ವಜ್ಞ ||

ಅರ್ಥ: ಸಾಲವನ್ನು ಕೊಡುತ್ತಿರುವವರೆಗೆ ಅದು ನೂರಿರಲಿ, ಎಷ್ಟೇ ಇರಲಿ ಅವನೊಂದಿಗೆ (ಸಾಲ ತೆಗೆದುಕೊಳ್ಳುವವನು) ಅತಿಯಾದ ವಿನಯದಿಂದ ನಡೆದುಕೊಳ್ಳುತ್ತಾನೆ; ಆದರೆ (ಕೊಟ್ಟವನು ತಾನು ಕೊಟ್ಟಿದ್ದರಲ್ಲಿಯ ಕೇವಲ) ಎರಡು-ಮೂರು ರೂಪಾಯಿಗಳನ್ನು ಮರಳಿ ಕೇಳಿದರೆ ಮಾತ್ರ ಅವನ ಮೇಲೆ ಮಣ್ಣು ತೂರಲು ಪ್ರಾರಂಭಿಸುವನು.

186. ಗಡ್ಡವಿಲ್ಲದವನ ಮೋರೆ | ದುಡ್ಡು ಇಲ್ಲದ ಚೀಲ |
ಬಡ್ಡಿ ಸಾಲ ತರುವವನ, ಬಾಳುವೆಯು |
ಅಡ್ಡಕ್ಕೂ ಬೇಡ ಸರ್ವಜ್ಞ ||

ಅರ್ಥ: ಗಡ್ಡವಿಲ್ಲದವನ ಮೋರೆಯು (ಮುಖವು) ಹಣವಿಲ್ಲದಂಥ ಬರಿಯ ಚೀಲವು ಹಾಗೂ ಬಡ್ಡಿಯ ಸಾಲವನ್ನು ತರುತ್ತಲೇ ಇರುವಂಥವನ ಬಾಳುವೆಯು ಇವು ಮೂರು ಯಾತಕ್ಕೂ ಬೇಡ.