49. ಕಂಡವರ ದಂಡಿಸುತ | ಕೊಂಡವರ ಒಡವೆಗಳ |
ನುಂಡುಂಡುಮಲಗಿ , ಮಡಿದ ಮೇಲವಗೆ ಯಮ |
ಗೊಂಡ ತಪ್ಪುವುದೇ ಸರ್ವಜ್ಞ ||
ಅರ್ಥ: ಕಂಡವರನ್ನು ದಂಡಿಸುತ್ತ ಅನ್ಯರ ಒಡವೆಗಳನ್ನು ಅಪಹರಿಸಿ, ಅದನ್ನು ತಿಂದು ಕಾಲಕಳೆದು ಸತ್ತುಹೋದಂಥವನಿಗೆ ಯಮಗೊಂಡವು (ನರಕ) ಎಂದಿಗೂ ತಪ್ಪಲಾರದು.
50.ಉಳ್ಳಲ್ಲಿ ಉಣಲಿಲ್ಲ | ಉಳ್ಳಲ್ಲಿ ಉಡಲಿಲ್ಲ |
ಉಳ್ಳಲ್ಲಿ ದಾನ, ಕೊಡಲೊಲ್ಲದವನೊಡನೆ |
ಕಳ್ಳಗೆ ನೃಪಗೆ ಸರ್ವಜ್ಞ ||
ಅರ್ಥ: (ತನ್ನ ಬಳಿ) ಇದ್ದಾಗ ಸರಿಯಾಗಿ ಮಾಡದಂಥವನು, ಒಳ್ಳೆಯ ಬಟ್ಟೆಗಳನ್ನು ತೊಡಲಾರದಂಥವನು ಹಾಗೂ (ಸತ್ಪಾತ್ರರಲ್ಲಿ) ದಾನವನ್ನು ಮಾಡಲಾರದಂಥವನ ಐಶ್ವರ್ಯವು ಕಳ್ಳರು ಹಾಗೂ ಸರಕಾರದ ಪಾಲಾಗುವುದರಲ್ಲಿ ಸಂಶಯವಿಲ್ಲ.
51. ಕೊಟ್ಟುಂಬಕಾಲದಲ್ಲಿ | ಕೊಟ್ಟುಣಲು ಕಲಿಯದೆ |
ಹುಟ್ಟಿಯ ಒಳಗೆ ಜೇನಿಕ್ಕಿ, ಪರರಿಗೆ |
ಬಿಟ್ಟು ಹೋದಂತೆ ಸರ್ವಜ್ಞ ||
ಅರ್ಥ: ಈ ವಚನದ ಅರ್ಥವು 50ನೆಯ ವಚನದ ಅರ್ಥದಂತೆಯೇ ಇದೆ.ಅಂದರೆ(ತನ್ನ ಬಳಿ) ಇದ್ದಾಗ ಇತರರಿಗೂ (ಇತ್ತು) ಕೊಟ್ಟು ತಾನೂ ಉಣದಂಥವನ ಬಾಳುವೆಯು ,ಜೇನ್ನೊಣವು ತಾನು ತಿನ್ನದೇ ಹುಟ್ಟಿನೊಳಗೆ ತುಪ್ಪವನ್ನು ಕೂಡಿ ಇಟ್ಟು ಪರರ ಪಾಲಿಗೆ ಮಾಡಿದಂತೆಯೇ ಸರಿ.