100. ಹೊಳೆಯ ನೀರೊಬ್ಬನೆ | ಅಲೆಯಬಹುದೆಂದರವ |
ಅಳೆಯಬಹುದೆಂದು ಎನಬೇಡ, ಮೂರ್ಖತನ |
ಕಳೆಯಲಳವಲ್ಲ ಸರ್ವಜ್ಞ ||
ಅರ್ಥ: ಹೊಳೆಯ ನೀರನ್ನು ಒಬ್ಬನೇ ಅಳೆಯಬಹುದೆಂದು ಎಂದೋರ್ವಮೂರ್ಖನು ಹೇಳಿದರೆ ಅವನೆದುರು ಹೌದೆಂದು ಹೇಳಬೇಕೆ ವಿನಃ ಅವನಲ್ಲಿ ಮೂರ್ಖತನ ಹೋಗಲಾಡಿಸುವ ಹವ್ಯಾಸಕ್ಕೆ ಹೋಗಬಾರದು.
101. ಹಂಗಿನಾ ಹಾಲಿನಿಂ | ದಂಬಲಿಯ ತಿಳಿಲೇಸು |
ಭಂಗಬಟ್ಟುಂಬ ಬಿಸಿಯಿಂದ, ತಿರಿವರ |
ಸಂಗವೇ ಲೇಸು ಸರ್ವಜ್ಞ ||
ಅರ್ಥ: (ಎರಡನೆಯವರ) ಹಂಗಿನಿಂದ ದೊರೆಯುವ ಹಾಲಿಗಿಂತಲೂ, ತಿಳಿಯಾದ ಅಂಬಲಿಯು ಒಳ್ಳೆಯದು. ಅವಮಾನಕರವಾದ ಬಿಸಿ ಅನ್ನಕ್ಕಿಂಲೂ ತಿರುಪೆಯದೇನೂ ಕೆಡುಕ್ಕಿಲ್ಲ.
102. ಸುಟ್ಟ ಬೆಳಸಿಯು ಲೇಸು | ಅಟ್ಟ ಬೋನವು ಲೇಸು |
ಕಟ್ಟಾಣಿ ಸತಿಯು ಇರೆ ಲೇಸು, ನಡುವಿಗೆ |
ದಟ್ಟಿ ಲೇಸೆಂದ ಸರ್ವಜ್ಞ ||
ಅರ್ಥ: (ತಿನ್ನಲು) ಸುಟ್ಟಂಥ ಬೆಳಸಿಯು (ಬಿಸಿಲುಗಾಳಿನ ತೆನೆಗಳು) ಒಳ್ಳೆಯದು. ಮಾಡಿದ ಅಡುಗೆಯು ಒಳ್ಳೆಯದು. ಪ್ರೀತಿಯ ಹೆಂಡತಿಯಿದ್ದರೆ ಬಹಳ ಒಳ್ಳೇದು. ಅದರಂತೆ ನಡುವಿಗೆ ಸೀರೆ ಇದ್ದರೆ ಒಳ್ಳೆಯದು.