ಗುರುವಾರ, ಸೆಪ್ಟೆಂಬರ್ 24, 2015

ಸರ್ವಜ್ಞನ ವಚನಗಳು 145-147

145. ಕಣ್ಣು ನಾಲಿಗೆ ಮನವು | ತನ್ನದೆಂದನಬೇಡ |
ಅನ್ಯರನು ಕೊಂದರೆನಬೇಡ, ಇವು ಮೂರು |
ತನ್ನ ಕೊಲ್ಲುವವು ಸರ್ವಜ್ಞ ||

ಅರ್ಥ: ಕಣ್ಣು, ನಾಲಿಗೆ ಹಾಗೂ ಮನಸ್ಸು (ಇವು ಮೂರನ್ನೂ) ನಿನ್ನದೆಂದೆಂದುಕೊಳ್ಳಬೇಡ. ಇವು ಮೂರು ವಸ್ತುಗಳು ನಿನ್ನನ್ನೇ ಕೊಲ್ಲುತ್ತವೆ. (ಆಗ ಮಾತ್ರ ನೀನು) "ನನ್ನನ್ನು ಅನ್ಯರು ಕೊಂದರು" ಎಂದು ನುಡಿಯಬೇಡ.

146. ವದನೆ ಯೋಗಿಗೆ ಹೊಲ್ಲ | ಬದನೆ ರೋಗಿಗೆ ಹೊಲ್ಲ |
ಕದನವದು ಹೊಲ್ಲ ನೆರೆಯಲಿ, ನಿದ್ದೆಗೆ |
ತುದಿಗಟ್ಟೆ ಹೊಲ್ಲ ಸರ್ವಜ್ಞ ||

ಅರ್ಥ: ಯೋಗಿಗೆ ಸುಂದರ ಸ್ತ್ರೀಯು ಬೇಡ. ರೋಗಿಗೆ ಬದನೆಕಾಯಿಯು ಹೊಲ್ಲ. ನೆರೆಹೊರೆಯಲ್ಲಿ ಜಗಳವು ಒಳ್ಳೆಯದಲ್ಲ. ಅದರಂತೆ ನಿದ್ರೆ ಮಾಡಲು ತುದಿಗಟ್ಟೆಯು ಒಳ್ಳೆಯದಲ್ಲ (ಏಕೆಂದರೆ ಕೆಳಗೆ ಬೀಳುವ ಭಯವಿರುತ್ತದೆ).

147. ಸಿಂದಿಯನು ಸೇವಿಪನು | ಹಂದಿಯಂತಿರುತಿಹನು |
ಹಂದಿಯೊಂದೆಡೆಗೆ ಉಪಕಾರಿ, ಕುಡುಕನು |
ಎಂದಿಗೂ ಬೇಡ ಸರ್ವಜ್ಞ ||

ಅರ್ಥ: ಸಿಂದಿ (ಹೆಂಡ) ವನ್ನು ಕುಡಿಯುವಂಥವನು ಹಂದಿಯಂತೆ ಇರುತ್ತಾನೆ. ಹಂದಿ ಒಂದು ಸಲ ಉಪಕಾರವಾದರೂ ಮಾಡಿತು. ಆದರೆ ಕುಡುಕನು ಮಾತ್ರ ಎಂದೆಂದಿಗೂ ಬೇಡ (ಅವನಿಂದ ಏನೂ ಆಗಲಾರದು).