ಸೋಮವಾರ, ಸೆಪ್ಟೆಂಬರ್ 7, 2015

ಸರ್ವಜ್ಞ ವಚನಗಳು 1-3

1. ನಂದಿಯನು ಏರಿದನ | ಚಂದಿರನ ಸೂಡಿದನ |
ಕಂದನ ಬೇಡಿ , ನಲಿದಾನು ನೆನೆವುತ್ತ |
ಮುಂದೆ ಪೇಳುವೆನು ಸರ್ವಜ್ಞ||

ಅರ್ಥ: ನಂದಿ ವಾಹನನೂ, ಚಂದ್ರನನ್ನು ತಲೆಯಲ್ಲಿ ಧರಿಸಿದವನೂ ಆದ ಶಂಕರನ ಸುತನನ್ನು , ಗಣಪತಿಯನ್ನು ಪ್ರಾರ್ಥಿಸಿ ಮುಂದಿನ ಪದ್ಯಗಳನ್ನು ಪ್ರಾರ್ಥಿಸುವೆನು.

2.ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |
ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |
ಕುಲವಾವುದಯ್ಯ ಸರ್ವಜ್ಞ ||

ಅರ್ಥ: ಚೆನ್ನಾಗಿ ಚರ್ಮದ ಹೊದಿಕೆಯುಳ್ಳ ಎಲುಬಿನ ಹಂದರ ಮತ್ತು ಮಲ - ಮೂತ್ರಾದಿಗಳು ತುಂಬಿಕೊಂಡಿರುವಂಥ ದೇಹಕ್ಕೆ ಕುಲವೆಲ್ಲಿಂದ ಬಂತು ? (ಜಾತಿ ಭೇದವಿಲ್ಲವೆಂಬುದೇ ಈ ಪದದ ಅರ್ಥವಾಗಿದೆ.)

3. ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ , ಗುರುವು ತಾ |
ನಾರಾದಡೇನು ಸರ್ವಜ್ಞ ||

ಅರ್ಥ: ತನಗೆ ಗೊತ್ತಿಲ್ಲದ ಊರಿನ ದಾರಿಯನ್ನು ಇಂಥವರೇ ತೋರಿಸಬೇಕೆಂಬ ನಿಯಮವಿರುವುದಿಲ್ಲ.ಅಂಥ ಸಮಯದಲ್ಲಿ ಯಾರು ದಾರಿ ತೋರಿಸಿದರೂ ಸರಿಯೇ, ಊರು ತಲುಪುತ್ತಾರೆ.ಅದರಂತೆ ಸತ್ಯದ ಅರಿವನ್ನು ತಿಳಿಸಿಕೊಡುವಂಥ ಗುರುವು ಎಂಥವನಿದ್ದರೇನು ?