118. ಹಾಲಿನ ಹಸು ಲೇಸು | ಶೀಲದ ಶಿಶು ಲೇಸು |
ಬಾಲೆಯು ಸಜ್ಜನೆಯು ಲೇಸು, ಹುಸಿಯಾಡದ |
ನಾಲಿಗೆಯು ಲೇಸು ಸರ್ವಜ್ಞ ||
ಅರ್ಥ: ಹಾಲು ಕರೆಯುವಂಥ ಆಕಳು ಒಳ್ಳೆಯದಿದ್ದಂತೆ ಶೀಲವಂತ ಶಿಶುವೂ ಸದ್ಗುಣಶೀಲೆಯಾದ ಬಾಲೆಯೂ ಒಳ್ಳೆಯವಳು. ಅದರಂತೆ ಹುಸಿಯಾಡದ ನಾಲಿಗೆಯೂ ಒಳ್ಳೆಯದು.
119. ಕಾಲು ಹೋದರೆ ಹೊಲ್ಲ | ಬಾಲೆ ಮುದುಕಗೆ ಹೊಲ್ಲ |
ನಾಲಿಗೆಯೆಯಡು ನುಡಿ ಹೊಲ್ಲ, ಸಮರದಲಿ |
ಸೋಲುವದೆ ಹೊಲ್ಲ ಸರ್ವಜ್ಞ ||
ಅರ್ಥ: ಕಾಲಿಲ್ಲದವನ ಜೀವನವು ಅಯೋಗ್ಯವಾದುದು. ಮುದುಕನಿಗೆ ಬಾಲೆಯು ಅಯೋಗ್ಯಳು. ಎರಡು ಮಾತನಾಡುವ ನಾಲಿಗೆಯು ಒಳ್ಳೆಯದಲ್ಲ. ಅದರಂತೆ ಯುದ್ಧದಲ್ಲಿ ಸೋಲುವುದು ಕೂಡ ಅಯೋಗ್ಯವಾದದ್ದು.
120. ಹುಸಿಯ ಪೇಳುವುದಕ್ಕಿಂತ | ಹಸಿದು ಸಾವುದು ಲೇಸು |
ಹಸಿದು ಮೆರೆಯುವನ ಬದುಕಿಂದ, ಹಂದಿಯ |
ಐಸಿರಿಯ ಲೇಸೆಂದ ಸರ್ವಜ್ಞ ||
ಅರ್ಥ: ಸುಳ್ಳು ಹೇಳಿ ಬದುಕುವುದಕ್ಕಿಂತ ಹಸಿವೆಯಿಂದ ಬಳಲುತ್ತ ಸತ್ತು ಹೋಗುವುದು ಒಳ್ಳೆಯದು; ಆ ರೀತಿ ಸುಳ್ಳಿನಿಂದ ಮೆರೆಯುವವನ ಬದುಕಿಗಿಂತ ಹಂದಿಯ ಹೊಲಸು ಬಹು ಉತ್ತಮವಾದುದೆಂದು ಹೇಳಬಹುದು.