178. ತುಂಬಿದಾ ಕೆರೆಬಾವಿ | ತುಂಬಿದಂತಿರುವುದೇ?
ನಂಬಿರಬೇಡ ಲಕ್ಷ್ಮಿಯನು, ಬಡತನವು |
ಬೆಂಬಿಡದೆ ಬಹುದು ಸರ್ವಜ್ಞ ||
ಅರ್ಥ: ತುಂಬಿದಂಥ ಕೆರೆ, ಬಾವಿಗಳು ಯಾವಾಗಲೂ ತುಂಬಿಕೊಂಡೇ ಇರುವುವೇ? (ಸಾಧ್ಯವಿಲ್ಲ) ಅದರಂತೆ ಐಶ್ವರ್ಯವನ್ನು ನಂಬಬೇಡ, ಸಿರಿಯ ಹಿಂದೆ ಬಡತನವು ಬಂದೇ ಬರುವುದು.
179. ಉದ್ದಾದ ಮೊಲೆ ಹೊಲ್ಲ | ಇದ್ದೂರ ಹಗೆ ಹೊಲ್ಲ |
ತಿದ್ದದ ಹೋರಿ ಉಳ ಹೊಲ್ಲ, ಬಡವಂತೆ |
ಬಿದ್ದ ನಡು ಹೊಲ್ಲ ಸರ್ವಜ್ಞ ||
ಅರ್ಥ: (ಅತಿಶಯ) ಉದ್ದವಾದ ಮೊಲೆಗಳು ಅನವಶ್ಯಕ, ಇದ್ದೂರಲ್ಲಿ ದ್ವೇಷವನ್ನು ಬೆಳೆಸುವುದು ಅಪಾಯಕರ. ಕೆಲಸಕ್ಕೆ ಬರುವಂತೆ ಅಳವಡಿಸಿಕೊಳ್ಳಲಾರದಂಥ ಹೋರಿಯು ಬಿತ್ತನೆಯ ಕೆಲಸಕ್ಕೆ ನಿರುಪಯೋಗಿಯು. (ಅದರಂತೆ) ನಡುಬಾಗಿದರೆ ಬಡವನು ನಿರುಪಯೋಗಿಯಾಗುತ್ತಾನೆ.
180. ಹುಣಸೆಯಿಂ ನೊರೆವಾಲು | ಗಣಿಕೆಯಿಂ ಹಿರಿತನವು |
ಮೆಣಸಿನಿಂ ಕದಳಿ ಕೆಡುವಂತೆ, ಬಡವ ತಾ |
ಸೆಣಸಿನಿಂ ಕೆಡಗು ಸರ್ವಜ್ಞ ||
ಅರ್ಥ: ಹುಣಸೆಯ ಹುಳಿಯಿಂದ ಹಾಲು, ಸೂಳೆಯಿಂದ (ಮನೆಯು) ಹಿರಿತನವು ಮೆಣಸಿನಿಂದ ಬಾಳೆಯು ಕೆಡುವಂತೆ ಬಡವನು (ತನ್ನಲ್ಲಿಯ) ಸಿಡುಕಿನಿಂದ ಕೆಡುತ್ತಾನೆ.