ಮಂಗಳವಾರ, ಸೆಪ್ಟೆಂಬರ್ 15, 2015

ಸರ್ವಜ್ಞನ ವಚನಗಳು 91-93

91. ಗೊರವನೂ ಸೂಳೆಯೂ | ಹರದಕ್ಕಸಾಲೆಯೂ |
ತಿರಿವನು, ವೈದ್ಯ, ದ್ವಿಜ, ಗಣಿಕ ಇನ್ನೊಬ್ಬ |
ರಿರವ ಸೈರಿಸರು ಸರ್ವಜ್ಞ ||

ಅರ್ಥ: ತಿರುಕ, ಸೂಳೆ, ಅಕ್ಕಸಾಲಿಗ, ವೈದ್ಯ ಹಾಗೂ ಬ್ರಾಹ್ಮಣ ಇವರುಗಳು ಒಬ್ಬರು ಇನ್ನೊಬ್ಬರ ಇರುವಿಕೆಯನ್ನು ನೋಡಿ ಸಹಿಸಲಾರರು.

92. ಹಾರುವರ ನಂಬಿದವ | ರಾರಾರು ಉಳಿದಿಹರು |
ಹಾರುವ ನಂಬಿ, ಭೂಪರು ಕೆಟ್ಟರಿ |
ನ್ನಾರು ನಂಬುವರು ಸರ್ವಜ್ಞ ||

ಅರ್ಥ: ಬ್ರಾಹ್ಮಣರನ್ನು ನಂಬಿ ಯಾರಾದರೂ ಉಳಿದಿರುವರೇ (ಇಲ್ಲವೇ ಇಲ್ಲ) ಆ ಹಾರುವರನ್ನು ನಂಬಿ ಅರಸರೇ ಕೆಟ್ಟು ಹೋಗಿರುವಾಗ ಇನ್ನಾರು ನಂಬುತ್ತಾರೆ ಅವರನ್ನು?

93. ಮೂರ್ಖಂಗೆ ಬುದ್ಧಿಯನು | ನೂರ್ಕಾಲ ಹೇಳಿದರೆ |
ಬೋರ್ಕಲ್ಲ ಮೇಲೆ ಮಳೆ ಹೂಯಿದಿರಾ ಕಲ್ಲು |
ನೀರ್ಕೊಂಬುದುಂಟೆ ಸರ್ವಜ್ಞ ||

ಅರ್ಥ: ಮೂರ್ಖನಿಗೆ ನೂರು ಸಲ ಬುದ್ಧಿ ಹೇಳಿದರೂ ಅದು ವ್ಯರ್ಥ. (ಹೇಗೆಂದರೆ) ಕಲ್ಲುಬಂಡೆಯ ಮೇಲೆ ಮಳೆ ಸುರಿದರೆ ಆ ಕಲ್ಲು ಎಂದಿಗಾದರೂ ನೀರನ್ನು ಹೀರಿಕೊಳ್ಳಬಹುದೇ? (ಅದಕ್ಕಾಗಿಯೇ ಅಂಥವರಿಗೆ ಬುದ್ಧಿ ಹೇಳಬಾರದು.