ಭಾನುವಾರ, ಸೆಪ್ಟೆಂಬರ್ 13, 2015

ಸರ್ವಜ್ಞನ ವಚನಗಳು 76-78

76. ಮುಟ್ಟು ಕಂಡವಳನ್ನು | ಮುಟ್ಟಲೊಲ್ಲರು ನೋಡ |
ಮುಟ್ಟು ತಾ ಪಡೆದು, ಹುಟ್ಟಿದಾ ದೇಹವನು |
ಮುಟ್ಟುತಿಹರೇಕೆ ಸರ್ವಜ್ಞ ||

ಅರ್ಥ: ಮುಟ್ಟಾದ ಹೆಂಗಸನ್ನು ಮುಟ್ಟಲು ಹೆದರುತ್ತಾರೆ. (ಆದರೆ) ಮುಟ್ಟು ತಡೆದ ನಂತರವೇ ಹುಟ್ಟಿದ ದೇಹವನ್ನು ಮಾತ್ರ ಮುಟ್ಟುತ್ತರೆ. ಅದು ಏಕೆ ?

77. ಉತ್ತಮ ಪಾಲ್ಗಡಲೋ | ಳೆತ್ತಿಹರೆ ಜನ್ಮವನು? |
ಉತ್ತಮರು ಆದಮರೆನಬೇಡ, ಹೊಲೆಯಿಲ್ಲ |
ದುತ್ತಮರು ಎಲ್ಲಿ ಸರ್ವಜ್ಞ ||

ಅರ್ಥ: (ತಾವು) ಉತ್ತಮರು ಒಳ್ಳೆಯ ಕುಲದಲ್ಲಿ ಜನಿಸಿದವರು ಎಂದು ಹೇಳಿಕೊಳ್ಳುವವರು ಹಾಲಿನ ಪಾಗರದೊಳಗೆ ಜನ್ಮವೆತ್ತಿದ್ದಾರೆಯೇ? ಅದಕ್ಕಾಗಿ ಉತ್ತಮರು - ಅಧಮರು ಎಂಬ ಭೇದಗಳೆಣಿಸಬೇಡ. ಹೊಲೆಯಿಲ್ಲದಂತಹ ಉತ್ತಮರಾದರೂ ಎಲ್ಲಿದ್ದಾರೆ? (ಇಲ್ಲವೇ ಇಲ್ಲ).

78. ಎಂಜಲೆಂಜಲು ಎಂದು | ಅಂಜುವರು ಹಾರುವರು |
ಎಂಜಲಿಂದಾದ ತನುವಿರಲಿ | ಅದನರಿದು|
ಅಂಜುತಿಹರೇಕೆ ಸರ್ವಜ್ಞ ||

ಅರ್ಥ: (ಈ) ಹಾರುವರು 'ಎಂಜಲು - ಎಂಜಲು ' ಎಂದು ಹಾರುತ್ತಿರುವರು. ತನುವೇ ಎಂಜಲಿನಿಂದಾದ ಬಳಿಕ ಅದನ್ನರಿತೂ (ಈ ರೀತಿ) ಅಂಜುವುದೇತಕ್ಕೆ? (ಅದರಲ್ಲೇನು ಹುರುಳಿಲ್ಲ).