ಶುಕ್ರವಾರ, ಸೆಪ್ಟೆಂಬರ್ 11, 2015

ಸರ್ವಜ್ಞನ ವಚನಗಳು 52-54

52. ಒಡಲಿಡಿದು ಗಳಿಸಿದಾ | ಒಡವೆಗಳು ಒಡನಿರಲು |
ಕೊಡದುಣ್ಣದಿಟ್ಟು ಮಾಡಿದರೆ, ಒಡವೆಯ |
ನೊಡನೆ ಹೂಳುವರೆ? ಸರ್ವಜ್ಞ ||

ಅರ್ಥ: (ತನ್ನ) ಹೊಟ್ಟೆಯನ್ನು ಕಟ್ಟಿ (ಬಂಗಾರದ) ಒಡವೆಗಳನ್ನು ಸಂಗ್ರಹಿಸಿಟ್ಟಿಕೊಂಡು (ಯಾರಿಗೂ ದಾನ ಧರ್ಮ ಮಾಡದೆ) ಒಂದು ದಿನ ಸತ್ಯುಹೋದರೆ ಅವನೊಂದಿಗೆ ಆ ಒಡವೆಗಳನ್ನು ಹೂಳುವರೇ? ಎಂದಿಗೂ ಇಲ್ಲ.

53. ಈಶನ ನೆನಹಿಲ್ಲ | ಮೀಸಲ ತನುವಿಲ್ಲ |
ಲೇಸಪ್ಪುದೊಂದು ಉಡಿಯಿಲ್ಲ, ಕೈಲಾಸ |
ವೇಶಿಯ ಮನೆಯೆ ಸರ್ವಜ್ಞ ||

ಅರ್ಥ: ಒಂದು ದಿನವೂ ಈಶ್ವರನನ್ನು ನೆನೆಯಲಿಲ್ಲ. ದೇಹವನ್ನು ಶುಚಿಯಾಗಿರಿಸಿಕೊಳ್ಳಲಿಲ್ಲ. ಒಳ್ಳೆಯದೆನ್ನುವ ಒಂದು ಮಾತನ್ನೂ ಆಡಲಿಲ್ಲ.(ಅಂದಾಗ) ಕೈಲಾಸವೇನು ವೈಶ್ಯೆಯ ಮನೆಯೇ? (ಎಲ್ಲರೂಪ್ರವೇಶಿಸಲು).

54. ಸಿರಿಯು ಭರವುಳ್ಳಾಗ | ಮರೆಯದಿರುವವ ಜಾಣ |
ಕೊರತೆಯಾದಾಗ ಕೊಡಲು, ತನಗಿಲ್ಲೆಂದು |
ಮರಗುವವನ ನೆಗ್ಗ ಸರ್ವಜ್ಞ ||

ಅರ್ಥ: ತನ್ನ ಬಳಿ ಐಶ್ವರ್ಯವಿದ್ದಾಗ ಅನ್ಯರನ್ನು ಮರೆಯಲಾರದಂಥವನು ಜಾಣನು, ಒಳ್ಳೆಯವನು. ಆದರೆ ತನ್ನ ಬಳಿ ಕೊರತೆಯಾದಾಗ (ಮಾತ್ರ) ಕೊಡಲು ಏನೂ ಇಲ್ಲವೆಂದು ಮರಗುವವನು ಮಹಾ ಮೂರ್ಖನು.