ಬುಧವಾರ, ಸೆಪ್ಟೆಂಬರ್ 23, 2015

ಸರ್ವಜ್ಞನ ವಚನಗಳು 142-144

142. ಹೆಣ್ಣನ್ನು ಹೊನ್ನನ್ನು | ಹಣ್ಣಾದ ಮರಗಳನು |
ಕಣ್ಣಿನಲಿ ಕಂಡು ಮನದಲ್ಲಿ, ಬಯಸದಿಹ |
ಅಣ್ಣಗಳು ಯಾರು ಸರ್ವಜ್ಞ ||

ಅರ್ಥ: (ಚೆಲುವೆಯಾದ) ಹೆಣ್ಣನ್ನು , ಬಂಗಾರವನ್ನು ಹಾಗೂ ಹಣ್ಣುಗಳಿಂದ ತುಂಬಿದ ಮರಗಳನ್ನು ಕಣ್ಣಿನಿಂದ ನೋಡಿ ಅವುಗಳನ್ನು (ಮನದಲ್ಲಿಯಾದರೂ) ಬಯಸದಂಥ ಅಣ್ಣಗಳು ಯಾರಾದರೂ ಇದ್ದಾರೆಯೇ? (ಇಲ್ಲ).

143. ವಚನದೊಳಗೆಲ್ಲರೂ | ಶುಚಿ, ವೀರ, ಸಾಧುಗಳು |
ಕುಚ, ವಸ್ತ್ರ ,ಹೇಮ, ಸೋಂಕಿದರೆ ಲೋಕದೊಳು |
ಗಚಲದವರಾರು ಸರ್ವಜ್ಞ ||

ಅರ್ಥ: ನಾನು ಶುಚಿ, ನಾನು ವೀರ, ನಾನು ಸಾಧು ಎಂದು ಮಾತಿನೊಳಗೆ ಹೇಳಿಕೊಳ್ಳಬೇಕಷ್ಟೆ. (ಅಂದರೆ) ಕುಚ, ಶಸ್ತ್ರ ಹಾಗೂ ಬಂಗಾರ ಇವು ಮೂರು ವಸ್ತುಗಳು ಸೋಂಕಿದರೂ ಕೂಡ ಚಂಚಲನಾಗದಂಥಳನು ಯಾವನಾದರು ಇದ್ದಾನಯೇ?

144. ತರಿಸುವದು ಮಿತ್ರರನು | ಮರೆಸುವದು ಬಳಗವನು |
ಇರಿಸುವದು ತನ್ನ ಇದಿರೆನು, ಹೊನ್ನಿನ |
ತರವ ಬೇಡೆಂದ ಸರ್ವಜ್ಞ ||

ಅರ್ಥ: ಐಶ್ವರ್ಯವು  ಮಿತ್ರರನ್ನು ತರಿಸುವುದು. ಬಂಧು-ಬಳಗದವರನ್ನು ಮರೆಯಿಸುವುದು. (ಹಾಗೂ ಅವರನ್ನು) ಅದರಲ್ಲಿಯೇ ತನ್ಮಯನನ್ನಾಗಿಸಿ ಮಾಡುವುದು. ಇಂಥ ಸಿರಿಯ ಸಂಗವೇ ಬೇಡ.