121. ಒಳ್ಳೆಯನು ಇರದೂರ | ಕಳ್ಳನೊಡನಾಟವೂ |
ಸುಳ್ವನ ಮಾತು ಇವು ಮೂರು, ಕೆಸರೊಳಗೆ |
ಮುಳ್ಳು ತುಳಿದಂತೆ ಸರ್ವಜ್ಞ ||
ಅರ್ಥ: ಒಳ್ಳೆಯವನು ಇರದಂಥ ಊರು, ಕಳ್ಳನೊಡನೆ ಸಲಿಗೆ ಹಾಗೂ ಸುಳ್ಳನ ಮಾತುಗಳು ಇವು ಮೂರು ಕೆಸರೊಳಗೆ ಮುಳ್ಳು ತುಳಿದಂತೆಯೇ ಸರಿ.
122. ಅಂದು ಕಾಮನ ಹರನು | ಕೊಂದನೆಂಬುದು ಪುಸಿಯು |
ಇಂದುವದನೆಯರ ಕಡೆಗಣ್ಣು , ನೋಟದಿ |
ನಿಂದಿಹು ಸ್ಮರನು ಸರ್ವಜ್ಞ ||
ಅರ್ಥ: ಅಂದು ಶಿವನು ಆಮನನ್ನು ಕೊಂದನೆಂಬುದು ಸುಳ್ಳು (ಏಕೆಂದರೆ) ಈಗಲೂ ಚಂದ್ರಮುಖಿಯರ ಕಡೆಗಣ್ಣ ನೋಟದಲ್ಲಿ ಕಾಮನು ನಿಂತುಕೊಂಡೇ ಇರುತ್ತಾನೆಂಬುದು ಯಾರಿಗೆ ಗೊತ್ತಿಲ್ಲ?
123. ಬೇಡ ಕಾಯದೆ ಕೆಟ್ಟ | ಜೇಡ ನೇಯದೆ ಕೆಟ್ಟ |
ನೋಡದಲೆ ಕೆಟ್ಟ ಕೃಷಿಕನು, ಸತಿಯ ಬಿ |
ಟ್ಟಾಡಿದವ ಕೆಟ್ಟ ಸರ್ವಜ್ಞ ||
ಅರ್ಥ: ಬೇಡನು (ಬಲೆಯನ್ನು) ಕಾಯದೇ ಕೆಟ್ಟನು. ಜೇಡರವನು (ನೇಕಾರನು) ನೇಯದೇ ಕೆಟ್ಟನು. ಒಕ್ಕಲಿಗನುತನ್ನ ಹೊಲದ ಬೆಳೆಯನ್ನು ನೋಡದೇ ಕೆಟ್ಟನು. ಅದರಂತೆ ಸತಿಯನ್ನು ಬಿಟ್ಟು ಅಡ್ಡಾಡಿದವನೂ ಕೆಟ್ಟನು.