ಸೋಮವಾರ, ಸೆಪ್ಟೆಂಬರ್ 21, 2015

ಸರ್ವಜ್ಞನ ವಚನಗಳು 130-132

130. ಮಾಡಿದುದ ಒಪ್ಪದನ | ಮೂಢನಾಗಿಪ್ಪವನ |
ಕೂಡಿತ ತಾ ಮಾಡಿ, ಇದಿರಾಡಿಕೊಳ್ಳುವನ |
ನೋಡಿದರೆ ತೊಲಗು ಸರ್ವಜ್ಞ ||

ಅರ್ಥ: (ತಾನು) ಮಾಡಿದ ತಪ್ಪನ್ನು ಒಪ್ಪದೆ ಇರುವಂಥವನ, ಮೂರ್ಖನಾಗಿರುವಂಥವನನ್ನು ಕಂಡರೆ (ಕೂಡಲೇ) ಅಲ್ಲಿಂದ ತೊಲಗಿಬಿಡು.

131. ಒಡಹುಟ್ಟಿದವ ಭಾಗ | ದೊಡವೆಯನು ಕೇಳಿದರೆ |
ಕೊಡದೆ ಕದನದಲಿ ಮಡಿದಿಹರೆ, ಅದನು ತ|
ನ್ನೊಡನೆ ಹೂಳುವರೆ ಸರ್ವಜ್ಞ ||

ಅರ್ಥ: ಒಡಹುಟ್ಟಿದ ಸೋದರನ (ತನ್ನ) ಪಾಲಿನ ಒಡವೆಗಳನ್ನು ಕೇಳಿದರೆ ಅವನಿಗೆ ಕೊಡದೆ ಹೊಡೆದಾಡಿ ಕದನದಲ್ಲಿಯೇ ಮಡಿದರೆ ಆ ಒಡವೆಗಳು ಅವನೊಂದಿಗೆ ಹೂಳುವರೇ. (ಎಂದಿಗೂ ಇಲ್ಲ)

132. ಅಂಧಕನು ನಿಂದಿರಲು | ಮುಂದೆ ಬಪ್ಪರ ಕಾಣ |
ಬಂದರೆ ಬಾಯೆಂದನದಿರ್ಪ, ಗರುವಿಯ |
ದಂದುಗವೇ ಬೇಡ ಸರ್ವಜ್ಞ ||

ಅರ್ಥ: ಕುರುಡನೊಬ್ಬನು ನಿಂತುಕೊಂಡಿರಲು ಅವನಿಗೆ ಮುಂದೆ ಬರುವಂಥವರ ಕಾಣಲಾರರು. ಆದರೆ ಬರುವಂಥವರನ್ನು ಕಂಡು ಬಂದರೂ ಬಾ ಎಂದು ಅನ್ನಲಾರದ ಗರ್ವಿಯ ಸಂಗವೇ ಬೇಡ.