ಸೋಮವಾರ, ಸೆಪ್ಟೆಂಬರ್ 14, 2015

ಸರ್ವಜ್ಞನ ವಚನಗಳು 85-87

85. ಹಾರುವರು ಸ್ವರ್ಗದ | ದಾರಿಯನು ಬಲ್ಲರೇ |
ನಾರಿ ಪತಿವ್ರತದಿ ನಡೆದಿಹರೆ, ಸ್ವರ್ಗದ |
ದಾರಿ ತೋರುವಳು ಸರ್ವಜ್ಞ ||

ಅರ್ಥ: ಹಾರುವರು (ಬ್ರಾಹ್ಮಣರು) ಸ್ವರ್ಗದ ಹಾದಿಯನ್ನು ಬಲ್ಲರೇ? ಅವರೇನು ನೋಡಿಕೊಂಡು ಬಂದಿದ್ದಾರೆಯೇ? (ಆದರೆ) ಪತಿವ್ರತಾ ಶಿರೋಮಣಿಯಾದ ನಾರಿಯು (ಮಾತ್ರ) ಸ್ವರ್ಗದ ದಾರಿಯನ್ನು ತೋರಬಲ್ಲಳು.

86. ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |
ಉತ್ತಮರಧಮರೆನಬೇಡ, ಅವರೊಂದು |
ಮುತ್ತಿನಂಥವರು ಸರ್ವಜ್ಞ ||

ಅರ್ಥ: ಒಳ್ಳೆಯವರೆಂದೆನಿಸಿಕೊಳ್ಳುವವರು ಸತ್ಯದಿಂದಲೇ ನಡೆದಿರುವರು, ನಡೆಯುತ್ತಾರೆ. ಅಂಥ ಉತ್ತಮರನ್ನು ಅಧಮರೆಂದು ತೆಗಳಬೇಡ. ಅವರೊಂದು ಅಮೂಲ್ಯ ಮುತ್ತಿನಂತೆ ಇರುವರು.

87.ಉತ್ತಮದ ವರ್ಣಿಗಳೇ | ಉತ್ತಮರು ಎನಬೇಡ |
ಮತ್ತೆ ತನ್ನಂತೆ, ಬಗೆವನೆಲ್ಲರನು |
ಉತ್ತಮರೆನ್ನು ಸರ್ವಜ್ಞ ||

ಅರ್ಥ: (ವರ್ಣಾಶ್ರಮದಲ್ಲಿಯ ಪ್ರಕಾರ) ಮೇಲಿನವರನ್ನು ಉತ್ತಮರೆನಬೇಡ.ತನ್ನಂತೆಯೇ ಪರರನ್ನೂ ತಿಳಿದುಕೊಳ್ಳುವಂಥವನೇ ಉತ್ತಮನೆಂದು ಕರೆ.