73. ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ |
ತೊಲೆಕಂಬವಿಲ್ಲ ಗಗನಕ್ಕೆ, ದೇವರಲಿ |
ಕುಲಭೇದವಿಲ್ಲ ಸರ್ವಜ್ಞ ||
ಅರ್ಥ: ನಾಲಿಗೆಗೆ ಎಲುಬು ಇರುವುದಿಲ್ಲ, ಬಡವನಿಗೆ ಯಾರದೂ ಬೆಂಬಲವಿರುವುದಿಲ್ಲ. ಆಕಾಶಕ್ಕೆ ತೊಲೆ-ಕಂಬಗಳು ಇರುವುದಿಲ್ಲ. ಅದರಂತೆ ದೇವರ ಬಳಿ ಯಾವುದೇ ರೀತಿಯ ಜಾತಿಭೇದವಿರುವುದಿಲ್ಲ.
74. ಸತ್ತ ಕತ್ತೆಯ ಹೊತ್ತ | ರೆತ್ತಣವ ಹೊಲೆಯನು? |
ಉತ್ತಮನೆಂದು ಹೆರರೊಡವೆ, ಹೊತ್ತರವ|
ನಿತ್ಯವೂ ಹೊಲೆಯ ಸರ್ವಜ್ಞ ||
ಅರ್ಥ: ಕೇವಲ ಸತ್ತು ಬಿದ್ದಂತಹ ಕತ್ತೆಯನ್ನು ಹೊತ್ತಾಕ್ಷಣಕ್ಕೆ(ಅವನು) ಹೊಲೆಯನಾಗಲಾರನು. ಉತ್ತಮನೆಂದು ಹೇಳಿಸಿಕೊಂಡು ನಿತ್ಯವೂ ಅನ್ಯರ (ಎರಡನೆಯವರ) ಸೊತ್ತನ್ನು ಎತ್ತಿ ಹಾಕುವವನು ಮಾತ್ರ ನಿತ್ಯವೂ ಹೊಲೆಯನು (ಇದರಲ್ಲಿ ಸಂಶಯವೇ ಇಲ್ಲ).
75. ಮುಟ್ಟಾಡ ಹೊಲೆಯೊಳಗೆ | ಹುಟ್ಟಿದುದು ಜಗವೆಲ್ಲ |
ಮುಟ್ಟಬೇಡೆಂದು ತೊಲಗುವಾ, ಹಾರುವನು |
ಹುಟ್ಟಿದನು ಎಲ್ಲಿ ಸರ್ವಜ್ಞ ||
ಅರ್ಥ: ಮುಟ್ಟಾದಂಥ ಹೊಲಸಿನೊಳಗೇ ಇಡಿಯ ಜಗತ್ತೆಲ್ಲ ಹುಟ್ಟಿರುವಾಗ ಮುಟ್ಟ ಬೇಡವೆಂದು ದೂರ ಹಾಯುವಂಥ ಹಾರುವನು ಹುಟ್ಟಿರುವುದಾದರೂ ಎಲ್ಲಿ? (ಅದೇ ಹೊಲೆಯಲ್ಲಿಯೇ ತಾನೇ?).