61. ಮುಟ್ಟಿ ಶ್ರೀಗಂಧವನು | ಇಟ್ಟು ತಾ ನೊಸಲೊಳಗೆ |
ನೆಟ್ಟನೆಯ ಸ್ವರ್ಗ ಪಡೆವಡೆ, ಸಾಣೆಕಲ್ |
ಪಟ್ಟ ಕೇಡೇನು ಸರ್ವಜ್ಞ ||
ಅರ್ಥ: ಬಹಳಷ್ಟು ಶ್ರೀಗಂಧವನ್ನು ಹಣೆಯ ಮೇಲೆ ಧರಿಸಿಕೊಂಡಾಕ್ಷಣಕ್ಕೆ ನೆಟ್ಟಗೆ ಸ್ವರ್ಗಕ್ಕೆ ಹೋಗುವಂತಾದರೆ (ತನ್ನ ಮೇಲೆಯೇ ಶ್ರೀಗಂಧವನ್ನು ತಯಾರಿಸಲು ಅನುವು ಮಾಡಿಕೊಟ್ಟ) ಸಾಣೇಕಲ್ಲು ಮಾಡಿದ ಪಾಪವೇನು? (ಅದು ಏಕೆ ಸ್ವರ್ಗಕ್ಕೆ ಹೋಗಬಾರದು)
62. ಸುಟ್ಟ ಬೂದಿಯ ತಂದು | ದಟ್ಟವಾಗಿಯೇ ಬಡಿದು |
ಶ್ರೇಷ್ಠ ಸ್ವರ್ಗವನು ಅಡರುವಡೆ, ಕತ್ತೆ ತಾ |
ಪಟ್ಟ ಕೇಡೇನು ಸರ್ವಜ್ಞ||
ಅರ್ಥ: ಸುಟ್ಟ ಬೂದಿಯನ್ನು ತಂದು ಮೈಗೆಲ್ಲ ಬಳಿದುಕೊಳ್ಳುವುದರಿಂದ ಶ್ರೇಷ್ಠ ಸ್ವರ್ಗವನ್ನು ಸೇರುತ್ತಿದ್ದರೆ (ಅಂಥ ಬೂದಿಯಲ್ಲಿಯೇ ಹೊರಳಾಡುವ) ಕತ್ತೆ ಮಾಡಿದ ಪಾಪವೇನು? (ಅದು ಏಕೆ ಸ್ವರ್ಗವನ್ನು ಸೇರಬಾರದು?)
63. ಮೂರೆಳೆಯನುಟ್ಟಾತ | ಹಾರುವಡೆ ಸ್ವರ್ಗಕ್ಕೆ |
ನೂರೆಂಟು ಎಳೆಯ ಕವುದಿಯನು, ಹೊದ್ದಾತ |
ಹಾರನೇಕಯ್ಯ ಸರ್ವಜ್ಞ ||
ಅರ್ಥ: ಮೂರೆಳೆಯ (ಜನಿವಾರವನ್ನು) ಧರಿಸಿಕೊಂಡವನು ಸ್ವರ್ಗಕ್ಕೆ ಹೋಗಬಲ್ಲವನಾದರೆ ನೂರಾ ಎಂಟು ಎಳೆಗಳುಳ್ಳಂಥ ಕವುದಿಯನ್ನು ಹೊದ್ದುಕೊಳ್ಳುವಂಥವನು ಸ್ವರ್ಗಕ್ಕೇಕೆ ಹೋಗಲಾರ?