ಮಂಗಳವಾರ, ಸೆಪ್ಟೆಂಬರ್ 22, 2015

ಸರ್ವಜ್ಞನ ವಚನಗಳು 133-135

133. ಜಾತಿ ಜಾತಿಗೆ ವೈರ | ನೀರಿ ಮೂರ್ಖಗೆ ವೈರ |
ಪಾತಕವು ವೈರ ಸುಜನರ್ಗೆ, ಅರಿದಂಗೆ |
ಏತರದು ವೈರ ಸರ್ವಜ್ಞ |

ಅರ್ಥ: ಜಾತಿ-ಜಾತಿಗಳಲ್ಲಿ ವೈರವು ಸ್ವಾಭಾವಿಕ. ಮೂರ್ಖನಿಗೆ ನೀತಿಯನ್ನು ಕಂಡರೆ ವೈರ ಹಾಗೂ ಸುಜನರಾದವರು ಪಾತಕವನ್ನು ವಿರೋಧಿಸುತ್ತಾರೆ. ಆದರೆ (ಎಲ್ಲವನ್ನೂ) ಅರಿತಂಥವನಿಗೆ ಯಾರ ವೈರತ್ವವೂ ಇರುವುದಿಲ್ಲ.

134. ಧನಕನಕವುಳ್ಳನಕ | ದಿನಕರನವೋಲಕ್ಕು |
ಧನಕನಕ ಹೋದ ಮರುದಿನವೇ, ಹಾಳೂರ |
ಶುನಕನಂತಕ್ಕು ಸರ್ವಜ್ಞ ||

ಅರ್ಥ: ತನ್ನ ಬಳಿ ಐಶ್ವರ್ಯವಿರುವವರೆಗೆ ಅವನು ಸೂರ್ಯನಂತೆ ಪ್ರಕಾಶಿಸುತ್ತಾನೆ. ಆದರೆ ಹೋದ ಮರುದಿನವೇ ಅವನು ಹಾಳೂರಿನ ನಾಯಿಯಂತಾಗುತ್ತಾನೆ.

135. ಮಡದಿ ಮಕ್ಕಳ ಮಮತೆ | ಒಡಲೊಡವೆಯಿರುತನಕ |
ಒಡಲೊಡವೆ ಕೆಟ್ಟ ಮರುದಿನವೆ, ಅವರೆಲ್ಲ |
ಕಡೆಗೆ ಸಾಗುವರು ಸರ್ವಜ್ಞ ||

ಅರ್ಥ: ಮಡದಿ-ಮಕ್ಕಳ ಪ್ರೀತಿಯು (ನಿನ್ನಲ್ಲಿ) ಒಡವೆಗಳಿರುವತನಕ ಮಾತ್ರ (ಆದರೆ ನಿನ್ನಲ್ಲಿಯ) ಒಡವೆಗಳು ನಾಶವಾದ ಮರುದಿನವೇ (ನಿನ್ನಿಂದ) ಅವರೆಲ್ಲರೂ ದೂರಾಗುವರು.