58. ಹಾದರ ಕಥೆಯನ್ನು | ಸೋದರರ ವಧೆಯನ್ನು |
ಆಧರಿಸಿ ಪುಣ್ಯ ಕಥೆಯೆಂದು, ಕೇಳುವವರು |
ಮಾದಿಗರು ನೋಡ ಸರ್ವಜ್ಞ ||
ಅರ್ಥ: ವ್ಯಭಿಚಾರದಿಂದ ತುಂಬಿದ ಕಥೆಯನ್ನೂ, ಸೋದರರ ಕೊಲೆಯನ್ನು ಅತ್ಯಂತ ಆದರದಿಂದ ಪುಣ್ಯ ಕಥೆಯೆಂದು ಕೇಳುವಂಥವರು ಮಾದಿಗರಲ್ಲದೆ ಇನ್ನಾರು?
59. ನೀರು ಮುಳುಗಿದ ವಿಪ್ರ | ಹಾರುವಡೆ ಸ್ವರ್ಗಕ್ಕೆ |
ಹಾರುವನೊಲು ಮುಳುಗಿಪ್ಪ, ಕಪ್ಪೆ ತಾ |
ಹಾರದೇಕೆಂದ ಸರ್ವಜ್ಞ ||
ಅರ್ಥ: ನೀರೊಳಗೆ ಮುಳುಗು ಹಾಕುವ ಬ್ರಾಹ್ಮಣನು ಸ್ವರ್ಗಕ್ಕೆ ಹೋಗಬಹುದಾದರೆ ಆ ಹಾರುವನಂತೆ ನೀರೊಳಗೆ ಮುಳುಗು ಹಾಕುವ ಕಪ್ಪೆಯುಕೂಡ ಸ್ವರ್ಗಕ್ಕೆ ಹೋಗಬೇಕಾಗುವುದು.
60.ನಿತ್ಯ ನೀರ್ಮಳುಗುವನು | ಹತ್ತಿದಡೆ ಸ್ವರ್ಗವನು |
ಎತ್ತಿ ಜನ್ಮವನು, ಜಲದೊಳಿಪ್ಪಾ ಕಪ್ಪೆ |
ಹತ್ತದೇಕೆಂದ ಸರ್ವಜ್ಞ ||
ಅರ್ಥ: ಪ್ರತಿನಿತ್ಯವೂ ನೀರೊಳಗೆ ಮುಳುಗಿ ಏರುವಂಥವನು ಸ್ವರ್ಗಕ್ಕೆ ಹೋಗುತ್ತಿದ್ದರೆ, ನೀರೊಳಗೆ ಜನ್ಮವೆತ್ತಿದ ಕಪ್ಪೆ ಏಕೆ ಸ್ವರ್ಗಕ್ಕೆ ಹತ್ತಲಾರದು?