160. ಹೋರುವಾ ಸತಿಯಿಂದ | ಸೋರುವಾ ಮನೆಯಿಂದ |
ಪೂರೈಸದವನ ಬದುಕಿಂದ, ಕೊಂಡೊಯ್ವ |
ಮಾರಿ ಲೇಸೆಂದ ಸರ್ವಜ್ಞ ||
ಅರ್ಥ: (ಯಾವಾಗಲೂ) ಜಗಳವಾಡುವಂಥ ಹೆಂಡತಿಗಿಂತ, (ಮಳೆ ಬಂದಾಗ) ಸೋರುವ ಮನೆಗಿಂತ ಹಾಗೂ ಪೂರೈಸಲಾಗದ ಬದುಕಿಗಿಂತ ಒಮ್ಮೆಲೇ ಎತ್ತಿಕೊಂಡು ಹೋಗುವಂಥ ಮರಣವು (ಸಾವಿರ ಪಾಲಿಗೆ) ಉತ್ತಮವಾದದ್ದು.
161. ಪ್ರಾಸವಿಲ್ಲದ ಪದವ | ತಾಸು ಹಾಡಿದರೇನು |
ಸಾಸಿವೆ ಎಣ್ಣೆ ಹದಮಾಡಿ, ಕಣ್ಣಿಂಗೆ |
ಹೂಸಿಕೊಂಡಂತೆ ಸರ್ವಜ್ಞ ||
ಅರ್ಥ: ಪ್ರಾಸವಿಲ್ಲದ ಪದ್ಯವನ್ನು ತಾಸುಗಟ್ಟಲೇ ಹಾಡುವುದರಿಂದ ಫಲವೇನು ? (ಆ ರೀತಿ ಮಾಡುವುದೆಂದರೆ) ಹದಮಾಡಿದ ಸಾಸಿವೆಯ ಎಣ್ಣೆಯನ್ನು ಕಣ್ಣಿನೊಳಗೆ ಹಾಕಿಕೊಂಡಂತೆಯೇ ಸರಿ. (ಹಾಕಿಕೊಂಡರೂ ಅದು ವ್ಯರ್ಥ).
162. ಓದಿದಾ ಓದು ತಾ | ಮೇದ ಕಬ್ಬಿನ ಸಿಪ್ಪೆ |
ಓದಿನಾ ಒಡಲ ನರಿದಿಹರೆ, ಸಿಪ್ಪಿ ಕ |
ಬ್ಬಾದಂತೆ ಕಾಣೋ ಸರ್ವಜ್ಞ ||
ಅರ್ಥ: ಓದಿಕೊಂಡಂಥ ಪುಸ್ತಕವು ತಿಂದುಹಾಕಿದ ಕಬ್ಬಿನ ಸಿಪ್ಪೆಯಂತೆ. ಓದಿನೊಳಗಿನ ತಿರುಳನ್ನರಿತುಕೊಂಡರೆ ಆ ಸಿಪ್ಪೆಯೇ ಮರಳಿ ಕಬ್ಬಾದಂತೆ.