124. ಕೊಟ್ಟು ಮರುಗಲು ಬೇಡ | ಬಿಟ್ಟು ಹಿಡಿಯಲುಬೇಡ |
ಕೆಟ್ಟ ನಡೆಯವಳ ನೆರೆ ಬೇಡ, ಪರಸತಿಯ |
ಮುಟ್ಟ ಬೇಡೆಂದ ಸರ್ವಜ್ಞ ||
ಅರ್ಥ: (ಇತರರಿಗೆ) ಕೊಟ್ಟಿದ್ದಕ್ಕಾಗಿಯೇ ಮರುಗಬೇಡ ಹಾಗೂ ಕೆಟ್ಟ ನಡೆಯುಳ್ಳಂಥ ಹೆಂಗಸಿನ ನೆರೆಹೊರೆಯರಲ್ಲಿರಬೇಡ. (ಅದರಂತೆ) ಎರಡನೆಯವರ ಮನೆಯ ಸ್ತ್ರೀಯನ್ನು ಮುಟ್ಟಬೇಡ.
125. ಹಣವಳಿದು ಹೋದರೂ | ಹೆಣಬೀಳ ಹೊಡೆದರೂ |
ಮೊಣಕಾಲಗಣಿಕೆ ಮುರಿದರೂ, ಹಾದರದ |
ಕುಣಿಕೆ ಬೇಡೆಂದ ಸರ್ವಜ್ಞ ||
ಅರ್ಥ: (ತನ್ನಲ್ಲಿಯ) ಹಣವು ಹಾಳಾಗಿ ಹೋದರೂ; ಸಾಯುವಂತೆ ಹೊಡೆದರೂ; ಮೊಣಕಾಲುಗಣಿಕೆಗಳನ್ನು ಮುರಿದರೂ ಕೂಡ ವ್ಯಭಿಚಾರ (ಹಾದರ) ಮಾಡಬೇಡ.
126. ಅನ್ಯ ಸತಿಯನು ಕಂಡು | ತನ್ನ ಹೆತ್ತವಳೆಂದು |
ಮನ್ನಿಸಿ ನಡೆವ ಪುರುಷಂಗೆ, ಇಹಪರದಿ |
ಮುನ್ನ ಭಯವಿಲ್ಲ ಸರ್ವಜ್ಞ ||
ಅರ್ಥ: ಪರಸ್ತ್ರೀಯೊಡನೆ ನ್ನ ಹೆತ್ತ ತಾಯೋಪಾದಿಯಲ್ಲಿ ನಡೆದುಕೊಳ್ಳುವ ಪುರುಷನಿಗೆ ಇಹದಲ್ಲೂ ಪರದಲ್ಲೂ ಯಾರ ಭಯವೂ ಇಲ್ಲ. ಅದಕ್ಕಾಗಿ ಹಾಗೆ ನಡೆದುಕೊಳ್ಳುವುದು ಒಳ್ಳೆಯದು.