4. ಬಂಧುಗಳು ಆದವರು | ಬಂದುಂಡು ಹೋಗುವರು |
ಬಂಧನವ ಕಳೆಯಲರಿಯರು , ಗುರುವಿಂದ |
ಬಂಧುಗಳು ಉಂಟೆ ಸರ್ವಜ್ಞ ||
ಅರ್ಥ: ಬಂಧು-ಬಳಗದವರೆಲ್ಲ ಬಂದು ಊಟಮಾಡಿ ಹೋಗುವುದಕ್ಕಷ್ಟೇ ಹೊರತು ಬಂಧನವನ್ನು ಕಳೆಯಲಾರರು;ಆದರೆ ಎಲ್ಲ ಬಂಧನಗಳನ್ನು ಹೊಡೆದೋಡಿಸುವಂಥ ಶಕ್ತಿಯುಳ್ಳ ಗುರುವಿಗಿಂತ ಹೆಚ್ಚಿನ ಬಂಧುಗಳು ಯಾರಿದ್ದಾರೆ ?(ಯಾರೂ ಇಲ್ಲ).
5. ತಂದೆಗೂ ಗುರುವಿಗೂ | ಒಂದು ಅಂತರವುಂಟು |
ತಂದೆ ತೋರುವನು ಸದ್ಗುರುವ, ಗುರುರಾಯ |
ಬಂಧನವ ಕಳೆವ ಸರ್ವಜ್ಞ ||
ಅರ್ಥ: ತಂದೆಗೂ ಮತ್ತು ಗುರುವಿಗೂ ಒಂದೇ ಒಂದು ಅಂತರವುಂಟು ಅದೆಂದರೆ ತಂದೆಯು ಒಳ್ಳೆಯ ಗುರುವನ್ನು ತೋರಿಸುತ್ತಾನೆ ಮತ್ತು ಗುರುವರ್ಯನು ಬಂಧನವನ್ನು ಕಳೆಯುತ್ತಾನ.
6. ಗುರು ಮನುಜನೆಂದವಗೆ | ಹರನ ಶಿಲೆಯೆಂದವಗೆ |
ಕರುಣ ಪ್ರಸಾದವನು , ಎಂಜಲೆಂದವಗೆ |
ನರಕ ತಪ್ಪುವದೇ ಸರ್ವಜ್ಞ ||
ಅರ್ಥ: ಗುರುವನ್ನು ಅವನೊಬ್ಬ ಮಾನವನು ಎನ್ನುವವನಿಗೆ , ದೇವದೇವನಾದ ಮಹದೇವನನ್ನು ಶಿಲೆ(ಕಲ್ಲಿನ ಮೂರ್ತಿ)ಎನ್ನುವವನಿಗೆ , ಪ್ರಸಾದವನ್ನು ಎಂಜಲು ಎಂದು ಹೀಯಾಳಿಸುವವನಿಗೆ ನರಕವು ಎಂದಿಗೂ ತಪ್ಪಲಾರದು.