ಬುಧವಾರ, ಸೆಪ್ಟೆಂಬರ್ 30, 2015

ಸರ್ವಜ್ಞನ ವಚನಗಳು 181-183

181. ಅಕ್ಕಿಯನು ಬೀಯಂಬ | ಬೆಕ್ಕನ್ನು ಪಿಲ್ಲೆಂಬ |
ಚೊಕ್ಕಟದ ತೇಜಿಗೆ ಕುರ್ರೆಂಬ, ತೆಲುಗನ |
ಸೊಕ್ಕು ನೋಡೆಂದ ಸರ್ವಜ್ಞ ||

ಅರ್ಥ: ಅಕ್ಕಿಗೆ 'ಬಿ' ಎನ್ನುವ ಬೆಕ್ಕಿಗೆ 'ಪಿಲ್ಲಿ' ಎಂಬುವ ಹಾಗೂ ಚೊಕ್ಕಟವಾದ ಕುದುರೆಗೆ 'ಕುರ್ರಂ' ಎನ್ನುವಂಥ ಆಂಧ್ರನ (ತೆಲುಗನ) ಸೊಕ್ಕು ಎಷ್ಟಿರಬೇಕು?.

182. ತಿಗುಳಿ ಜನ ಗೆಣೆಯಿಂದ | ಬೊಗಳುವಾ ಶುನಿ ಲೇಸು |
ಮುಗುಳಿಯ ಮರದ ನೆರಳಿಂದ, ನುಂಗುವ |
ನೆಗಳು ಲೇಸೆಂದ ಸರ್ವಜ್ಞ ||

ಅರ್ಥ: ತಿಗಳು ಜನರು (ತಮಿಳರ) ಗೆಳೆತನಕ್ಕಿಂತ ಬೊಗಳುವ ನಾಯಿಯೇ ಒಳ್ಳೆಯದು. (ಅದರಂತೆ) ಮುಗುಳಿಯ (ಒಂದು ಜಾತಿಯ ಜಾಲಿಯ ಮರ) ಮರದ ನೆರಳಿಗಿಂತ ನುಂಗಿ ಬಿಡುವಂಥ ಮೊಸಳೆ ಉತ್ತಮ.

183. ಹರಳು ಕಾಲಿಗೆ ಹಿಲ್ಲ | ಹುರುಳಿ ಕತ್ತೆಗೆ ಹೊಲ್ಲ |
ಇರುಳೊಳು ಪಯಣ ಬರೆಹೊಲ್ಲ, ತೊತ್ತಿಂಗೆ |
ಕುರುಳು ತಾ ಹೊಲ್ಲ ಸರ್ವಜ್ಞ ||

ಅರ್ಥ: ಕಾಲಿಗೆ ಹರಳು ಅನಾವಶ್ಯಕ, ಕತ್ತೆಹುರುಳಿಯು ಅನಾವಶ್ಯಕ, ರಾತ್ರಿಯಲ್ಲಿನ ಪ್ರಯಾಣವು ಅಯೋಗ್ಯವಾದುದು. (ಅದರಂತೆ) ಸೇವಕಿಗೆ ಮುಂಗುರುಳುಗಳು ಗಂಡಾಂತರಕಾರವಾಗಿದೆ.