ಶನಿವಾರ, ಸೆಪ್ಟೆಂಬರ್ 12, 2015

ಸರ್ವಜ್ಞನ ವಚನಗಳು 64-66

64. ಹಿರಿದು ಕರ್ಮವ ಮಾಡಿ | ಹರಿವ ನೀರೊಳು ಮುಳುಗೆ |
ಕರಗುವದೇ ಪಾಪ? ತಾನು ಮುನ್ನ ಮಾಡಿದ್ದು |
ಎರೆಯ ಕಲ್ಹೆಂಟೆ ಸರ್ವಜ್ಞ ||

ಅರ್ಥ: ಪಾಪ ಕರ್ಮವನ್ನು ಮಾಡಿ ಹರಿಯುವ (ಹೊಳೆಯ) ನೀರೊಳಗೆ ಮುಳುಗಿ ಎದ್ದರೆ ಪಾಪವು ಕರಗಿ ಹೋಗುವುದೇ? (ಆ ರೀತಿ ಕರಗಿ ಹೋಗಲು ಅದು, ಅಂದರೆ) ಮೊದಲು ಮಾಡಿದ ಪಾಪವು ಎರೆಮಣ್ಣಿನ ಮುದ್ದೆಯೇ ಕರಗಿ ಹೋಗಲಿಕ್ಕೆ.

65. ಮೀಪರೇ ಪೋಪರೇ | ಪಾಪವೇನದು ಕೆಸರೇ |
ಮೀಪರೇ ಮೈಯ್ಯ ಮಲ, ಪೋಪುದಾ ಪಾಪ |
ಲೇಪವಾಗಿಕ್ಕು ಸರ್ವಜ್ಞ||

ಅರ್ಥ: ಸ್ನಾನ ಮಾಡಿದರೆ ಹೋಗಲಿಕ್ಕೆ ಪಾಪವೇನು ಕೆಸರೇ ? ಸ್ನಾನ ಮಾಡುವುದರಿಂದ ಮೈಮೇಲಿನ ಹೊಲಸು ಹೋಗಬಹುದು;(ಆದರೆ) ಪಾಪವು ಲೇಪದಂತೆ ಅಂಟಿಕೊಂಡೇ ಇರುವುದು.

66. ಪಾಪ ಹೋಯಿತು | ಎಂದು ಸೋಪಾನಗಳನೇರಿ |
ಕೋಪ ಕರ್ಮಗಳ ಬಿಡದಿರೆ, ಅದು ವಜ್ರ |
ಲೇಪದಂತಿಹುದು ಸರ್ವಜ್ಞ ||

ಅರ್ಥ: (ಸ್ನಾನಾದಿಗಳಿಂದ) ಪಾಪವೆಲ್ಲ ಹೋಗಿಬಿಟ್ಟಿತು ಎಂದು(ತನ್ನಷ್ಟಕ್ಕೆ ತಾನೇ ತಿಳಿದುಕೊಂಡು) ಸೋಪವನ್ನೇರಿ ಕೋಪವೇ ಮೊದಲಾದ ಕರ್ಮಗಳಿಂದ ದೂರವಿರದೇ ಅಂಥವುಗಳನ್ನು ಮುಂದುವರಿಸುತ್ತ ಹೋದರೆ ಕಡಿಮೆಯಾಗಲಾರದು.