97. ಒಂದನ್ನು ಎರಡೆಂಬ | ಹಂದಿಗ್ಹೆಬ್ಬುಲಿಯೆಂಬ |
ನಿಂದ ದೇಗುಲವು ಮರನೆಂಬ, ಮೂರ್ಖ ತಾ |
ನೆಂದಂತೆ ಎನ್ನಿ ಸರ್ವಜ್ಞ ||
ಅರ್ಥ: ಒಂದಕ್ಕೆ ಎರಡೆನ್ನುವಂಥ, ಹಂದಿಗೆ ಹೆಬ್ಬುಲಿಯೆನ್ನುವಂಥ, ದೇವಾಲಯಕ್ಕೆ ಮರವೆನ್ನುವಂಥ ಮೂರ್ಖನಂದಂತೆಯೇ ಅಂದು ಸುಮ್ಮನಾಗಬೇಕು. (ಎದುರು ವಾದಿಸಲು ಹೋಗಬಾರದು).
98. ನೆಲವನ್ನು ಮುಗಿಲನ್ನು | ಹೊಲಿವರುಂಟೆಂದರಿವ |
ಹೊಲಿವರು ಹೊಲಿವರೆನಬೇಕು, ಮೂರ್ಖನಲಿ |
ಕಲಹಬೇಡೆಂದ ಸರ್ವಜ್ಞ||
ಅರ್ಥ: ಭೂಮಿ ಮತ್ತು ಆಕಾಶವನ್ನು ಕೂಡಿಸಿ ಹೊಲೆಯುವರುಂಟೆ ಎಂದರೆ 'ಹೌದು ಹಲಿಯುವರು' ಎಂದು ಹೇಳಬೇಕೆ ವಿನಹ ಮೂರ್ಖನೊಂದಿಗೆ ವಾದಕ್ಕೆ ನಿಲ್ಲಬಾರದು.
99. ಬೆಟ್ಟವನು ಕೊಂಡೊಬ್ಬ | ನಿಟ್ಟಿಹನು ಎಂದಿಹರೆ |
ಇಟ್ಟಿಹನು ಎನಬೇಕು, ಮೂರ್ಖನ |
ಬಟ್ಟೆ ಕಲಹಬೇಡೆಂದ ಸರ್ವಜ್ಞ ||
ಅರ್ಥ: ಒಬ್ಬನು ಬೆಟ್ಟವನ್ನು ಎತ್ತಿಕೊಂಡು ಹೋಗಿ ಇಟ್ಟಿರುವನು ಎಂದು ಮೂರ್ಖನು ಹೇಳಿದರೆ, 'ಹೌದು ಇಟ್ಟಿರುವನು' ಎಂದು ಹೇಳಿ ಅಲ್ಲಿಂದ ಸರಿಯಬೇಕೇ ವಿನಃ ಅವನೊಂದಿಗೆ ವಾದ ಮಾಡಕೂಡದು.