ಮಂಗಳವಾರ, ಸೆಪ್ಟೆಂಬರ್ 29, 2015

ಸರ್ವಜ್ಞನ ವಚನಗಳು 172-174

172. ಮತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ | ಹೊತ್ತೇರಿ ಹೊಲಕೆ ಹೋದರೆ, ಅವ ತನ್ನ | ನೆತ್ತರವ ಸುಡುವ ಸರ್ವಜ್ಞ || ಅರ್ಥ: ಬಿತ್ತುವ ಪೂರ್ವದಲ್ಲಿ ಒಂದು ಸಲ ಹರಗದೆ, ಬಿತ್ತಿದ ನಂತರ ಒಂದು ಸಲ ನೋಡದೆ, ಮತ್ತು ಹೊತ್ತು ಏರಿದ ನಂತರ ಹೊಲಕ್ಕೆ ಹೋಗುವಂಥವನು ತನ್ನ ರಕ್ತವನ್ನು ತಾನೇ ಸುಟ್ಟುಕೊಂಡಂತೆ. 173. ಹರಗದ ಎತ್ತಾಗೆ | ಬರಡಾದ ಹಯನಾಗೆ | ಹರಟೆ ಹೊಡೆಯು ಮಗನಾಗೆ, ಹೊಲದಲ್ಲಿ | ಕರಡವೇ ಬೆಳಗು ಸರ್ವಜ್ಞ || ಅರ್ಥ: (ಹೊಲವನ್ನು) ಹರಗದಂಥ ಎತ್ತುಗಳು, (ಮನೆಯಲ್ಲಿ) ಹಿಡಿಲಾರದಂಥ ಎಮ್ಮೆ-ಆಕಳುಗಳು, ಹಾಳು-ಹರಟೆಯಲ್ಲಿಯೇ ಹೊತ್ತು ಕಳೆಯುವಂಥ ಮಗನು ಇದ್ದುದಾದರೆ ಹೊಲದಲ್ಲಿ ಹುಲ್ಲಿನ ಹೊರತು ಮತ್ತೇನನ್ನು ಬೆಳೆಯಲು ಸಾಧ್ಯವಿಲ್ಲ. 174. ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ | ಬಂಡಿಯಿಲ್ಲದ ಬೇಸಾಯ, ತಲೆಹೋದ | ಮುಂಡದಂತಿಕ್ಕು ಸರ್ವಜ್ಞ || ಅರ್ಥ: ಸೈನ್ಯವಿರದೆ ಇದ್ದ ಅರಸನು, ಕುಂಡವಿಲ್ಲದಂಥ ಯಜ್ಞವು ಹಾಗೂ ಚಕ್ಕಡಿ ಇಲ್ಲದಂಥವನ ಬೇಸಾಯವು (ಒಕ್ಕಲುತನ) ಇವು ಮೂರು ತಲೆಯಿಲ್ಲದವನ ಮುಂಡದಂತೆಯೇ ಸರಿ.