ಗುರುವಾರ, ಸೆಪ್ಟೆಂಬರ್ 10, 2015

ಸರ್ವಜ್ಞನ ವಚನಗಳು 43-45

43. ಉಣ್ಣಡೊಡವೆಯ ಗಳಿಸಿ | ಮಣ್ಣಿನೊಳು ತಾನಿರಿಸಿ |
ಸಣ್ಣಸಿ ನೆಲವಸಾರಿದನ ,ಬಾಯೊಳಗೆ |
ಮಣ್ಣು ಕಾಣಯ್ಯ ಸರ್ವಜ್ಞ ||

ಅರ್ಥ: (ತನ್ನ ಹೊಟ್ಟೆಗೆ ತಿನ್ನದೆ ಒಡವೆಗಳನ್ನು ಸಂಪಾದಿಸಿ ಅವುಗಳನ್ನು ನೆಲದೊಳಗೆ ಹೂತಿಟ್ಟು ಮೇಲೆ ಸೂಸು ಮಣ್ಣಿನಿಂದ ಅಲ್ಲಿಯ ನೆಲವನ್ನು ಸಾರಿಸುತ್ತಿರುವವನ ಬಾಯೊಳಗೆ ಮಣ್ಣು ಬೀಳದೆ ಅರಲಾರದು.

44. ಉಣ್ಣೆ ಕೆಚ್ಚಲೋಳಿರ್ದು | ಉಣ್ಣದದು ನೊರೆವಾಲು |
ಪುಣ್ಯವಮಾಡಿ ಉಣ್ಣಲೊಲ್ಲದ ನಿರವು |
ಉಣ್ಣೆಗೂ ಕಷ್ಟ ಸರ್ವಜ್ಞ ||

ಅರ್ಥ: ಉಣ್ಣೆಯು ಕೆಚ್ಚಲೊಳಗಿದ್ದರೂ ಕೂಡ ಅದು ಹಾಲನ್ನು ಕುಡಿಯುವುದಿಲ್ಲ.(ಅದರಂತೆ)ಪುಣ್ಯವನು ಮಾಡಿ ಉಣಲಾರದಂಥವನ ಬಾಳುವೆಯು ಉಣ್ಣೆಗಿಂತಲೂ ಕಷ್ಟಕರವಾಗುವುದರಲ್ಲಿ ಸಂದೇಹವಿಲ್ಲ.

45. ಭಿಕ್ಷೆವೆಂದವರಿಗೆ | ಭಿಕ್ಷೆಯನು ನೀಡಿದರೆ |
ಅಕ್ಷಯ ಪದವು ದನಗಕ್ಕು, ಇಲ್ಲವೆನೆ |
ಭಿಕ್ಷುಕನಕ್ಕು ಸರ್ವಜ್ಞ ||

ಅರ್ಥ: ದೇಹಿ ಎಂದು ಬಂದವರಿಗೆ ಭಿಕ್ಷೆಯನ್ನು ನೀಡುವವನು ಅಕ್ಷಯ ಪದವನ್ನು ಪಡೆಯುವನು. ಆದರೆ ನೀಡಲಾರದಂಥವನು ಮಾತ್ರ(ಒಂದು ದಿನ) ಭಿಕ್ಷುಕನಾಗುವನು.