ಸೋಮವಾರ, ಸೆಪ್ಟೆಂಬರ್ 7, 2015

ಸರ್ವಜ್ಞ ವಚನಗಳು 10-12

10. ದಾನಭಕ್ತಿಗಳಲ್ಲಿ | 'ನಾನು' ಮರೆದಿರಬೇಕು |
ನಾನೆಂಬ ರೋಗ ನೀಗಿದಗೆ, ಗುರುಭೋದೆ ||
ತಾನೆ ಫಲಿಸುವದು ಸರ್ವಜ್ಞ ||

ಅರ್ಥ: ಭಕ್ತಿ , ದಾನ , ಧರ್ಮಗಳೇ ಮೊದಲಾದವುಗಳಲ್ಲಿ 'ನಾನು' ಎಂಬ ಅಹಂಕಾರವಿರಬಾರದು.(ನಾನು ಭಕ್ತಿವಂತ , ನಾನು ದಾನಿ ಎಂಬ ಗರ್ವವಿರಬಾರದು.)ಮನುಷ್ಯನು ತನ್ನಲ್ಲಿಯ 'ನಾನು'ಎಂಬ ಗರ್ವದ ರೋಗದಿಂದ ಪಾರಾದರೆ ಅವನಿಗೆ ಗುರುಬೋಧೆಯ ಫಲವು ತಾನಾಗಿಯೇ ದೊರೆಯುವುದು.

11. ಶ್ವಾನ ತೆಂಗಿನಕಾಯಿ | ತಾನು ಮೆಲಬಲ್ಲುದೆ |
ಹೀನಮನದವನಿಗುಪದೇಶವಿತ್ತಡದು |
ಹಾನಿ ಕಣಯ್ಯ ಸರ್ವಜ್ಞ ||

ಅರ್ಥ: ನಾಯಿಯು ತೆಂಗಿನಕಾಯಿಯನ್ನು ತಿನ್ನಬಲ್ಲುದೇ? ಎಂದಿಗೂ ಸಾಧ್ಯವಿಲ್ಲ.ಅದರಂತೆ ಹೀನ ಮನದ ಮನುಷ್ಯನಿಗೆ ಉಪದೇಶವಿತ್ತರೆ ಅದರಿಂದ ಹಾನಿಯೇ ಹೊರತು ಉಪಯೋಗವು ಎಳ್ಳಷ್ಟೂ ಇಲ್ಲ.

12. ಕಟ್ಟಿಗೆಗಳೆರಡನ್ನು | ಕಟ್ಟಿಟ್ಟರೇನಹುದು |
ಗಟ್ಟ್ಯಾಗಿ ಎರಡು ಮಥಿಸಲ್ಕೆ , ಬೇಗೆಯದು |
ಬೆಟ್ಟಕೊಂಡಂತೆ ಸರ್ವಗಮಜ್ಞ ||

ಅರ್ಥ: ಎರಡು ಕಟ್ಟಿಗೆಯ ತುಂಡುಗಳನ್ನು ಒಂದೆಡೆ ಸೇರಿಸಿ ಕಟ್ಟಿ ಇಟ್ಟರೆ ಅದರಿಂದ ಏನೂ ಆಗಲಾರದು.ಅವು ಒಂದು ಮೂಲೆಯಲ್ಲಿ ಬಿದ್ದುಕೊಂಡಿರುತ್ತವೆ ಅಷ್ಟೆ.ಆದರೆ ಅವೆರಡೂ ತುಂಡುಗಳನ್ನು ಒಂದಕ್ಕೊಂದು ಚೆನ್ನಾಗಿ ತಿಕ್ಕಿದರೆ ಅಗ್ನಿಯು ಉತ್ಪನ್ನವಾಗಿ ಬೆಟ್ಟವನ್ನೇ ಹಿಡಿದುಕೊಳ್ಳುತ್ತದೆ.